ಬೆಳ್ತಂಗಡಿ, ಸೆ 09 (DaijiworldNews/MS): ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಂಜು ಬೀಳುತ್ತಿರುವ ಪರಿಣಾಮ ದಾರಿ ಕಾಣದೇ, ಶುಕ್ರವಾರ ಸಂಜೆ 2 ಪ್ರತ್ಯೇಕ ಅಪಘಾತ ಸಂಭವಿಸಿದೆ.
ಚಾರ್ಮಾಡಿ ಘಾಟಿ ಬಿದಿರುತಳ ಗ್ರಾಮದ ಬಳಿ ಮಂಗಳೂರಿಗೆ ಸಾಗುತ್ತಿದ್ದ ಬೊಲೆರೋ ವಾಹನ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ತಡೆಗೋಡೆ ಕುಸಿದುಬಿದ್ದಿದ್ದು, ವಾಹನ ಅರ್ಧ ಗೋಡೆಯಿಂದಾಚೆಗೆ ಚಾಚಿಕೊಂಡು, ಅದೃಷ್ಟವಾಶತ್ ಪ್ರಪಾತಕ್ಕೆ ಉರುಳುವುದು ತಪ್ಪಿದೆ. ವಾಹನ ಪ್ರಯಾಣಿಕರು ಭಾರಿ ಅನಾಹುತದಿಂದ ಪಾರಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಬಸ್ಸು-ಕಾರು ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ತಡೆಗೋಡೆ ಕುಸಿದು ಬಿದ್ದಿದೆ. ಪ್ರಪಾತದ ಬಳಿಯೇ ಅಪಘಾತ ಆಗಿದ್ದರೂ ಭಾರೀ ಅನಾಹುತ ಜಸ್ಟ್ ಮಿಸ್ ಆಗಿದೆ. 2 ಅಪಘಾತದಲ್ಲೂ ಕಾರು-ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ತಡೆಗೋಡೆ ನಿರ್ಮಿಸಲು ಸ್ಥಳಿಯರು ಆಗ್ರಹಿಸಿದ್ದಾರೆ.
22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿಯಲ್ಲಿ ಮಳೆ ಜೊತೆಗೆ ಮಂಜು ಮುಸುಕಿದ್ದು, ವಾಹನಗಳನ್ನು ಚಾಲನೆಗೆ ಚಾಲಕರು ಹರಸಾಹಸಪಡುವ ಸ್ಥಿತಿ ನಿರ್ಮಾಣವಾಗಿದೆ.