ಕಾರ್ಕಳ, ಸೆ 08 (DaijiworldNews/MS): ಪರಶುರಾಮನ ವಿಗ್ರಹದ ರಿಯಾಲಿಟಿ ಚೆಕ್ ಆಗ್ರಹಿಸಿ ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆಯುತ್ತಿರುವ ಅನಿರ್ದಿಷ್ಠಾವಧಿ ಸತ್ಯಾಗ್ರಹವು ಆರನೇ ದಿನಕ್ಕೆ ಮುಂದುವರೆದಿದೆ. ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ ಗುರುವಾರ ಭೇಟಿ ನೀಡಿ ಪ್ರತಿಭಟನೆಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಆರೋಗ್ಯ ದೃಷ್ಟಿಯಿಂದ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವಂತೆ ಪ್ರತಿಭಟನಕಾರರಲ್ಲಿ ಮನವಿ ಮಾಡಿದ್ದಾರೆ.
ಹದಿನೈದು ದಿನಗಳೊಳಗೆ ಪ್ರತಿಮೆಯ ರಿಯಾಲಿಟಿ ಚೆಕ್ ನಡೆಸಬೇಕು. ಅಲ್ಲಿಯವರೆಗೆ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಸಿ.ಸಿ.ಟಿವಿ ಅಳವಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಕುಂದಾಪುರ ಸಹಾಯಕ ಕಮಿಷನರ್ ಮಾತನಾಡಿ, ಸರಕಾರದ ನಿಯಮದ ಪ್ರಕಾರ ಪ್ರತಿಮೆಯ ಗುಣಮಟ್ಟ ಪರಶೀಲಿಸಲು ಸಿದ್ಧರಿದ್ದೇವೆ. ಆದರೆ 2 ತಿಂಗಳ ಕಾಲಾವಕಾಶ ಬೇಕಾಗಿದೆ ಎಂದರು. ಪ್ರತಿಭಟನಾಕಾರರು ಮಾತನಾಡಿ, ಯಾವುದೇ ಸರಕಾರದ ಪೂರ್ವಾನುಮೋದನೆ ಪಡೆಯದೆ, ನಿರಾಕ್ಷೇಪಣಾ ಪತ್ರವಿಲ್ಲದೆ ಪರಶುರಾಮ ಥೀಂ-ಪಾರ್ಕ್ಗೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 7 ಕೋಟಿ ರೂ. ಬಿಲ್ ಪಾವತಿಸಿದ್ದೀರಿ. ಅಲ್ಲಿ ನಿಯಮವನ್ನು ಉಲ್ಲಂಘಿಸಿದ ಜಿಲ್ಲಾಡಳಿತ, ಇದೀಗ ಮೂರ್ತಿಯ ರಿಯಾಲಿಟಿ ಚೆಕ್ ಕುರಿತಂತೆ ಕಾನೂನು ಪ್ರಕ್ರಿಯೆಗಳ ನೆಪವೊಡ್ಡುವುದು ಸರಿಯೇ? ಎಂದು ಪ್ರಶ್ನಿಸಿದರು. ನಮ್ಮ ಬೇಡಿಕೆ ಈಡೇರಿಸುವುದಾಗಿ ಲಿಖಿತವಾಗಿ ನೀಡಿದಲ್ಲಿ ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಮುಂದಿನ ಕ್ರಮವನ್ನು ಪ್ರಕಟಿಸುವುದಾಗಿ ಎ.ಸಿ. ತಿಳಿಸಿದರು.
ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮಾತನಾಡಿ, ಪ್ರತಿಮೆಯನ್ನು ಪ್ರತಿಷ್ಠಾಪಿಸದೆ ಉದ್ಘಾಟನೆಯನ್ನು ತರಾತುರಿಯಲ್ಲಿ ನಡೆಸುವ ಅವಶ್ಯಕತೆ ಏನಿತ್ತು? ಜನರ ಭಾವನೆಗಳ ಜೊತೆ ಚೆಲ್ಲಾಟ ನಡೆಸುವುದು ಸರಿಯಲ್ಲ. ಕೂಡಲೇ ಕ್ರಮ ಕೈಗೊಳ್ಳಿ. ಮೂರ್ತಿಯ ಗುಣಮಟ್ಟ ತನಿಖೆ ಆಗುವವರೆಗೆ ಕಾಮಗಾರಿ ಸ್ಥಗಿತಗೊಳಿಸಿ ಎಂದರು. ಸಹಾಯಕ ಕಮಿಷನರ್ ಮಾತನಾಡಿ, ಒಂದು ತಿಂಗಳೊಳಗೆ ಮೂರ್ತಿಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವುದಾಗಿ ಭರವಸೆ ನೀಡಿದರು.
ಐದು ನಿಮಿಷದ ಕೆಲಸ..!
ಪ್ರತಿಮೆಯ ರಿಯಾಲಿಟಿ ಚೆಕ್ ಕೇವಲ ಐದು ನಿಮಿಷದ ಕೆಲಸ. ನೀವು ಯಾಕೆ ಹಿಂಜರಿಯುತ್ತೀರಿ?. ವಿಳಂಬ ಮಾಡುವುದರಲ್ಲಿ ಏನೋ ಸತ್ಯ ಅಡಗಿದೆ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು. ಮೂರ್ತಿ ಕಂಚಿದ್ದೋ ಅಥವಾ ಇನ್ನಾವುದೋ ? ಎಂಬುವುದನ್ನು ಪರಿಶೀಲಿಸಿ ಐದು ನಿಮಿಷದ ಕೆಲಸ ಎಂದರು ಪ್ರತಿಭಟನಕಾರರು.