ಕುಂದಾಪುರ, ಸೆ 06 (DaijiworldNews/MS): ಬೆಂಗಳೂರು ಮೈಸೂರು ಮಂಗಳೂರಿಗೆ ಬರುತಿದ್ದ ಗಾಡಿ ಸಂಖ್ಯೆ 16585 ಎಕ್ಸ್ಪ್ರೆಸ್ ರೈಲನ್ನು ಮುರುಡೇಶ್ವರದವರೆಗೆ ವಿಸ್ತರಿಸಿ ಭಾರತೀಯ ರೈಲ್ವೇ ಆದೇಶ ಹೊರಡಿಸಿದೆ .ಇದರೊಂದಿಗೆ ಕುಂದಾಪುರ ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ರಾಜದಾನಿ ಬೆಂಗಳೂರು ಹಾಗು ಮೈಸೂರಿಗೆ ನಿತ್ಯ ರೈಲೊಂದು ಸಿಕ್ಕಂತಾಗಿದೆ.
ಕಳೆದ ಒಂದೂವರೆ ವರ್ಷದಿಂದ ಸತತವಾಗಿ ಈ ಹೋರಾಟ ಕೈಗೆತ್ತಿಕೊಂಡಿದ್ದ ಕುಂದಾಪುರ ರೈಲ್ವೇ ಸಮಿತಿ ಹಾಗು ದೆಹಲಿ ಮಟ್ಟದಲ್ಲಿ ನಿರಂತರ ಕೆಲಸ ಮಾಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭಿಸಿದೆ . ್ಈಗಿರುವ ಕರಾವಳಿಯ ಜೀವನಾಡಿ ಪಂಚಗಂಗಾ ಎಕ್ಸ್ಪ್ರೆಸ್ ಬೆಂಗಳೂರಿನಿಂದ ಬೇಗನೆ ಹೊರಡುತ್ತದೆ ಹಾಗೂ ಅದರಲ್ಲಿ ಟಿಕೇಟು ಸಿಗುವುದಿಲ್ಲ ಎಂಬ ದೂರುಗಳಿಗೆ ಈಗ ಪರಿಹಾರ ಸಿಕ್ಕಂತಾಗಿದ್ದು, ಬೈಯಪ್ಪನ ಹಳ್ಳಿಯಿಂದ ಹೊರಟು ರಾತ್ರಿ ಒಂಬತ್ತು ಘಂಟೆಗೆ ಮೆಜೆಸ್ಟಿಕ್ ಬರುವ ರೈಲು ಮೈಸೂರು ಮಾರ್ಗವಾಗಿ ಮಂಗಳೂರು ಉಡುಪಿ ಕುಂದಾಪುರ ಮೂಲಕ ಸಂಚರಿಸಲಿದೆ.
ಮದ್ಯಾಹ್ನ ಮೂರುವರೆ ಸುಮಾರಿಗೆ ಕರಾವಳಿಯಿಂದ ಹೊರಡುವ ರೈಲು ಬೆಳಿಗ್ಗೆ ಆರಕ್ಕೆ ಬೆಂಗಳೂರು ತಲುಪಲಿದೆ .
ವಾರಕ್ಕೆ ಮೂರು ದಿನ ಮಂಗಳೂರಿನವರೆಗೆ ಮಾತ್ರ ಓಡುತಿದ್ದ ಈ ರೈಲನ್ನು ಆರೂದಿನ ಓಡುವಂತೆ ಮಾಡಿ ಕುಂದಾಪುರ ಕಾರವಾರಕ್ಕೆ ವಿಸ್ತರಣೆ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಸತತವಾಗಿ ಪ್ರಯತ್ನಿಸಿದ್ದು , ಅವರ ಬೇಡಿಕೆಯಂತೆ ವಾರಕ್ಕೆ ಮೂರು ದಿನದ ಬದಲು ಆರು ದಿನ ಓಡುವಂತೆ ಭಾರತೀಯ ರೈಲ್ವೇ ಕಳೆದ ವರ್ಷವೇ ಆದೇಶ ಮಾಡಿತ್ತು .ಆದರೆ ರೈಲಿನ ಉಡುಪಿ ಕುಂದಾಪುರ ಕಾರವಾರ ವಿಸ್ತರಣೆ ಮಾತ್ರ ವಿಳಂಭವಾಗುತ್ತಲೇ ಇದ್ದ ಕಾರಣ ,ಕುಂದಾಪುರ ರೈಲ್ವೇ ಸಮಿತಿ ನಿರಂತರವಾಗಿ ಕೊಂಕಣ ರೈಲ್ವೆ, ದಕ್ಷಿಣ ರೈಲ್ವೇ ಹಾಗು ನೈರುತ್ಯ ರೈಲ್ವೇ ಜತೆ ಬೆಂಗಳೂರಿಗೆ ಹೆಚ್ಚುವರಿ ರೈಲು ಸೇವೆಯ ಹೋರಾಟ ನಡೆಸಿತ್ತು .
ಸಂಸದರ ಯತ್ನದಿಂದ ಎಲ್ಲಾ ಸಮಸ್ಯೆಗಳನ್ನೂ ಮೀರಿ ರೈಲ್ವೇ ಸಚಿವರ ಒಪ್ಪಿಗೆ ಪಡೆದುದಲ್ಲದೇ ರೈಲ್ವೇ ಅದಿಕಾರಿಗಳ ಸಭೆ ಕರೆದು ದಸರಾ ಒಳಗೆ ರೈಲು ಓಡಲೇ ಬೇಕೆಂದು ಕಟ್ಟು ನಿಟ್ಟಿನ ಸೂಚನೆ ರವಾನಿಸಿದ ಪರಿಣಾಮ ಇಲಾಖೆ ಈ ರೈಲಿನ ವಿಸ್ತರಣೆಗೆ ಆದೇಶ ನೀಡಿದೆ.
"ಕುಂದಾಪುರ ರೈಲ್ವೇ ಸಮಿತಿಯ ನಿರಂತರ ಪ್ರಯತ್ನ ಹಾಗು ಮೈಸೂರು ಸಂಸದರ ಅಧ್ಭುತ ಕೆಲಸದಿಂದಾಗಿ ಕರಾವಳಿ ಕರ್ನಾಟಕಕ್ಕೆ ಹೊಸ ರೈಲು ಸೇವೆ ಲಭಿಸಿದ್ದು ಇದು ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಬಾರೀ ಅನುಕೂಲವಾಗಿದೆ". - ಗಣೇಶ್ ಪುತ್ರನ್ ಕುಂದಾಪುರ ರೈಲ್ವೇ ಸಮಿತಿ
"ಮೈಸೂರನ್ನು ಕರಾವಳಿಯ ಜತೆ ಬೆಸೆಯಲು ಸಂಪರ್ಕ ಕ್ರಾಂತಿಯ ಸಂಸದ ಎಂದೇ ಖ್ಯಾತಿಯಾದ ಪ್ರತಾಪ್ ಸಿಂಹರ ಶ್ರಮ ಹಾಗು ಭಾರತೀಯ ರೈಲ್ವೇಯ ಹಿರೀಯ ಅದಿಕಾರಿಗಳ ಸಹಕಾರದಿಂದ ಕರಾವಳಿಗೆ ಈ ಸೇವೆ ಲಭ್ಯವಾಗಿದ್ದು, ಬೆಂಗಳೂರಿನಿಂದ ತಡವಾಗಿ ಹೊರಡುವವರಿಗೆ ಹಾಗು ಬೆಂಗಳೂರು ಬೇಗನೆ ತಲುಪ ಬೇಕು ಎನ್ನುವವರಿಗೆ ಈ ವಿಸ್ತರಣೆಯಿಂದ ಅನುಕೂಲವಾಗಲಿದೆ". ಗೌತಮ್ ಶೆಟ್ಟಿ ಕುಂದಾಪುರ ರೈಲ್ವೇ ಸಮಿತಿ