ಬಂಟ್ವಾಳ, ಏ 10(MSP): ಕೇಂದ್ರ ಸರಕಾರದ ಹಲವು ಯೋಜನೆಗಳು ಬಡವರಿಗೆ ಪ್ರಯೋಜನ ಲಭಿಸಿದ್ದರೆ, ಅವು ಯು.ಪಿ.ಎ. ಅವಧಿಯಲ್ಲಿದ್ದಾಗ ಜಾರಿಗೊಂಡದ್ದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳದಲ್ಲಿ ಬುಧವಾರ ಪತ್ರಿಕಾಗೋಷ್ಟಿ ಮಾತನಾಡಿದ ಅವರು, ಉದ್ಯಮಪತಿಗಳಿಗೆ ಲಾಭದಾಯಕವಾಗುವ ಯೋಜನೆಗಳನ್ನು ಎನ್.ಡಿ.ಎ. ಮಾಡಿತು. ಇದರ ಪರಿಣಾಮ ಲಕ್ಷಾಂತರ ಮಧ್ಯಮ, ಬಡ ವರ್ಗದವರು ಬೀದಿಗೆ ಬರುವಂತಾಯಿತು. ಶಿಕ್ಷಣ, ಆರೋಗ್ಯ, ಸಾಕ್ಷರತೆ ಸಹಿತ ಹಲವು ಯೋಜನೆಗಳನ್ನು ಕಾಂಗ್ರೆಸ್ ಸರಕಾರ ತಂದಿತ್ತು. ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು ಯೋಜನೆಗಳಿಂದಾಗಿ ಜನರಿಗೆ ಲಾಭವಾಗಿತ್ತು. ಹಲವು ಕಾಯ್ದೆಗಳು ಜನರಿಗೆ ವರವಾದರೆ, ಬಿಜೆಪಿಯ ಯಾವುದೇ ಯೋಜನೆಗಳು ಜನರಿಗೆ ಲಾಭ ನೀಡದೆ ಕೇವಲ ಉದ್ಯಮಪತಿಗಳಿಗೆ, ಬಡವರಲ್ಲದವರಿಗೆ ಉಪಕಾರವಾಗಿದೆ ಎಂದು ಆರೋಪಿಸಿದರು.
ಪಣಂಬೂರಿನಲ್ಲಿರುವ ಡಾಕ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಎನ್.ಡಿ.ಎ.ಸರಕಾರದ ಅವಧಿಯಲ್ಲಿ ಇದ್ದಕ್ಕಿದ್ದಂತೆ ಮುಂಬಯಿಗೆ ವರ್ಗಾಯಿಸಲಾಯಿತು. ನೂರಾರು ದಕ್ಷಿಣ ಕನ್ನಡದ ಕಾರ್ಮಿಕರು ಬೀದಿ ಪಾಲಾಗುವ ಸ್ಥಿತಿ ಬಂತು. ಬಿಎಸ್ಸೆನ್ನೆಲ್ ಗುತ್ತಿಗೆ ನೌಕರರಿಗೆ ವೇತನ ನೀಡದೆ ನಾಲ್ಕಾರು ತಿಂಗಳಾಯಿತು. ಆ ಸಂದರ್ಭ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ ರೈ, ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಜನರ ಬೆಂಬಲ ವ್ಯಕ್ತವಾಗಿದ್ದು, ದ.ಕ. ಕ್ಷೇತ್ರದಿಂದ ಕಾಂಗ್ರೆಸ್ ಗೆಲ್ಲಿಸಿದರೆ ಬಡವರ ಪರ ಸೇವೆ ಮಾಡಲು ಅವಕಾಶವಾಗುತ್ತದೆ ಎಂದರು.
11ರಂದು ಬಹಿರಂಗ ಪ್ರಚಾರ: ಮಿಥುನ್ ರೈ ಅವರು 11ರಂದು ಬಂಟ್ವಾಳದಲ್ಲಿ ಬಹಿರಂಗ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದು, ಬೆಳಗ್ಗೆ 7 ಕ್ಕೆ ಸರಪಾಡಿ, 7.30ಕ್ಕೆ ಕಕ್ಯಬೀಡು, 8 ಗಂಟೆಗೆ ಕಕ್ಯಪದವು, 8.30ಕ್ಕೆ ಕಾವಳಕಟ್ಟೆ, 9ಕ್ಕೆವಗ್ಗ, 9.15ಕ್ಕೆ ಕಾರಿಂಜ, 9.30ಕ್ಕೆ ಪೂಂಜ, 10ಕ್ಕೆ ಕೆರೆಬಳಿ, 10.30ಕ್ಕೆ ಸಂಗಬೆಟ್ಟು, 10.45ಕ್ಕೆ ಕಲ್ಕುರಿ, 11 ಗಂಟೆಗೆ ಸಿದ್ದಕಟ್ಟೆಯ ವಿವಿಧೆಡೆ ಭೇಟಿ, 11.30ಕ್ಕೆ ಬಡ್ಡಕಟ್ಟೆಯಿಂದ ಬಸ್ತಿಪಡ್ಪುವರೆಗೆ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕರೋಪಾಡಿ, 3 ಗಂಟೆಗೆ ಕನ್ಯಾನದಲ್ಲಿ ಸಾರ್ವಜನಿಕ ಸಭೆ, 4 ಗಂಟೆಗೆ ಸಾಲೆತ್ತೂರಿನಲ್ಲಿ ಸಾರ್ವಜನಿಕ ಸಭೆ, ಸಂಜೆ 5ಕ್ಕೆ ನಂದಾವರ, 6ಕ್ಕೆ ಗೂಡಿನಬಳಿಯಲ್ಲಿ ಪಾದಯಾತ್ರೆ ನಡೆಸಿ, 7ಕ್ಕೆ ಕೈಕಂಬ ಜಂಕ್ಷನ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಪದ್ಮಶೇಖರ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಮಾಜಿ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲಿಯಾನ್, ಬಿ.ಎಂ.ಅಬ್ಬಾಸ್ ಆಲಿ, ಪಕ್ಷ ಪ್ರಮುಖರಾದ ಸಂಜೀವ ಪೂಜಾರಿ, ಸದಾಶಿವ ಬಂಗೇರ, ಜಗದೀಶ ಕೊಯ್ಲ ಮತ್ತಿತರರು ಉಪಸ್ಥಿತರಿದ್ದರು.