ಕೋಟ, ಸೆ 06 (DaijiworldNews/MS): ಇಲ್ಲಿನ ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಕಾರ್ಕಡ ತೆಂಕೋಳಿ ಪರಿಸರದಲ್ಲಿ ವಾಹನ ಚಾಲಕನೊರ್ವ ಕೃಷಿ ಕಾಯಕದಲ್ಲಿ ಪಳಗಿ ಅದರಲ್ಲೆ ತನ್ನ ಜೀವನದ ಯಶೋಗಾಧೆ ಆರಂಭಿಸಿ ಯಶಸ್ಸು ಕಂಡಿದ್ದಾರೆ.
ಉಮೇಶ್ ಕಾರ್ಕಡ ಎನ್ನುವ ವಾಹನ ಚಾಲಕ ತನ್ನ ವೃತ್ತಿ ಕಾಯಕದ ನಡುವೆ ಅಲ್ಪ ಸ್ವಲ್ಲ ಕೃಷಿ ಕಾರ್ಯ ಅನುಸರಿಸಿ ಇದೀಗ ಎಕ್ಕರೆಗಟ್ಟಲೆ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ.
ಸಾಮಾನ್ಯವಾಗಿ ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮುದಾಯ ಕೃಷಿ ಕ್ಷೇತದಲ್ಲಿ ಉತ್ಸಾಹ ಕುಂಠಿತಗೊಳ್ಳುವ ದಿನಗಳಲ್ಲಿ ಉಮೇಶ್ ಪೂಜಾರಿ ಯುವಕರಿಗೆ ಮಾದರಿಯಾಗಿದ್ದಾರೆ. ಇವರ ಜತೆ ಇವರ ಪತ್ನಿ ಪೂರ್ಣಿಮಾ ಪತಿಗೆ ಹೆಗಲಿಗೆ ಹೆಗಲಾಗಿ ಸಾಥ್ ನೀಡುತ್ತಿದ್ದಾರೆ.
ಶ್ರಮ ಜೀವಿ ಉಮೇಶ್
ಉಮೇಶ್ ಪೂಜಾರಿ ತನ್ನ ಪೂರ್ವಿಕರು ಮಾಡಿಕೊಂಡು ಬಂದ ಕೃಷಿ ಕಾಯಕವನ್ನು ನಿರಂತರವಾಗಿಸುವ ನಿಟ್ಟಿನಲ್ಲಿ ಐರೋಡಿ ಪರಿಸರದ ಸಂಜೀವ ಪೂಜಾರಿಯವರ ಮಾರ್ಗದರ್ಶದಲ್ಲಿ ಕೃಷಿ ಕಾರ್ಯಕ್ಕೆ ವೇಗ ನೀಡಿದ್ದಾರೆ.ವಾಹನ ಚಾಲನೆಯ ಮೂಲಕ ಪ್ರಸಿದ್ಧಿಗೊಂಡ ಉಮೇಶ್ ಇದೀಗ ಸ್ವಂತ ವಾಹನವನ್ನು ಬಾಡಿಗೆಗೆ ಇರಿಸಿಕೊಂಡು ಭತ್ತ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯಲು ಅಣಿಯಾಗಿ ಇದೀಗ ಆ ಪರಿಸರದಲ್ಲಿ ಹೆಚ್ಚಿನ ಹಡಿಲುಭೂಮಿಯನ್ನು ಹಸನಾಗಿಸಿದ್ದಾರೆ.
ಹಡಿಲುಭೂಮಿಯಲ್ಲಿ ಬಂಗಾರದ ಬೆಳೆ
ಕಾರ್ಕಡ ಪರಿಸರದ ಸಾಕಷ್ಟು ಕೃಷಿ ಭೂಮಿಗಳು ಹಡಿಲುಭೂಮಿಗಳಾಗಿದ್ದ ಕಾಲದಲ್ಲಿ ಉಮೇಶ್ ಪೂಜಾರಿ ಆ ಭೂಮಿ ಮಾಲಿಕರನ್ನು ಸಂಪರ್ಕಿಸಿ ಹಡಿಲುಭೂಮಿಯನ್ನು ಹಸಿರಾಗಿಸಿದ್ದಾರೆ.ಗೇಣಿ ಪಡೆದ ಭೂಮಿಗಳಲ್ಲಿ ಅದರ ಮಾಲಿಕರಿಗೆ ಅಲ್ಪಸ್ವಲ್ಪ ಬೆಳೆಗಳನ್ನು ನೀಡಿ ಲಾಭದಾಯಕ ಕೃಷಿಯಾಗಿಸಿದ್ದಾರೆ.
ಸಮಗ್ರ ಕೃಷಿ ನೀತಿಯಲ್ಲೆ ಯಶಸ್ಸು
ಕರಾವಳಿಯ ಈ ಭೂಭಾಗದಲ್ಲಿ ಹವಾಮಾನಕ್ಕೆ ಅನುಗುಣವಾಗಿ ಒಂದೆರಡು ಬೆಳೆಗಳನ್ನು ಬೆಳೆಯುತ್ತಾರೆ ಅದರಲ್ಲೆ ಕೃಷಿಕರು ಸಂತೃಪ್ತಿ ಕಾಣುತ್ತಾರೆ. ಆದರೆ ಉಮೇಶ್ ಸಮಗ್ರ ಕೃಷಿ ನೀತಿ ಅನುಸರಿಸಿ ಯಶಸ್ಸು ಕಾಣುತ್ತಿದ್ದಾರೆ.ತನ್ನ ಈ ಕೃಷಿ ಭೂಮಿಯಲ್ಲಿ ಜೂನ್ ಮಳೆಗಾಲದಲ್ಲಿ ಭತ್ತ, ಬೆಂಡೆ, ಹೀರೆಕಾಯಿ,ಅಗಸ್ಟ್ ಮಾಸದಲ್ಲಿ ತೊಂಡೆ, ಸೌತೆಕಾಯಿ, ಕುಂಬಳ, ಅಲಸಂಡೆ, ನವೆಂಬರ್ ತಿಂಗಳಲ್ಲಿ ಶೇಂಗಾ,ಉದ್ದು,ಹೆಸರು,ಕಲ್ಲಂಗಡಿ ಹಣ್ಣು ಬೆಳೆಯುತ್ತಾರೆ. ಆ ಮೂಲಕ ಸಮಗ್ರ ಕೃಷಿ ಯಶಸ್ಸಿನ ಭಾಗವಾಗಿಸಿಕೊಂಡಿದ್ದಾರೆ
ಬೇಕಿದೆ ಸರಕಾರದ ನೆರವು
ಕೃಷಿ ಕಾರ್ಯಕ್ಕೆ ಸರಕಾರ ಸಂಪೂರ್ಣ ಸಹಕಾರ ಅಗತ್ಯವಾದ ಇಂದಿನ ದಿನಗಳಲ್ಲಿ ರೈತ ಸಮುದಾಯಕ್ಕೆ ಬೇಕಾದ ಕೃಷಿ ಪರಿಕರ ,ಯಂತ್ರೋಪಕಣಗಳನ್ನು ಹೆಚ್ಚಿನ ಸಬ್ಸಿಡಿ ದರದಲ್ಲಿ ನೀಡಿದರೆ ಇಂಥಹ ಸಾಕಷ್ಟು ಯುವ ಕೃಷಿ ಆಸಕ್ತರು ಮುನ್ನಲ್ಲೆಗೆ ಬರುವುದರಲ್ಲಿ ಅನುಮಾನವೇ ಇಲ್ಲ ಆದರೂ ಇಲ್ಲಿನ ಉಮೇಶ್ ಪೂಜಾರಿ ಬೇಡಿಕೆಯೂ ಇದೆ ಆಗಿದೆ ತನಗೊಂದು ಟ್ಯಾಕ್ಟರ್ ಸೇರಿದಂತೆ ವಿವಿಧ ಕೃಷಿ ಪರಿಕರವನ್ನು ಇರಿಸಿಕೊಂಡು ಮತ್ತಷ್ಟು ಕೃಷಿ ಕಾಯಕ್ಕೆ ವೇಗ ನೀಡಲಿದ್ದಾರೆ ಎನ್ನುವ ಬಯಕೆ ಅವರದ್ದಾಗಿದ್ದು ಕೃಷಿ ಕಾಯಕಕ್ಕೆ ನೀರಿನ ಸಮಸ್ಯೆ ಎದುರಿಸುತ್ತಿದ್ದು ಸರಕಾರದ ನೆರವಿನಿಂದ ಬಾವಿ ವ್ಯವಸ್ಥೆಗೂ ಸ್ಥಳೀಯಾಡಳಿತದ ಜನಪ್ರತಿನಿಧಿಗೆ ಮನವಿ ಮಾಡಿದ್ದಾರೆ.
ಸಾವಯವ ಗೊಬ್ಬರ ಅನುಸರಣೆ
ಪ್ರಸ್ತುತ ವಿದ್ಯಾಮಾನದಲ್ಲಿ ಕೃಷಿಗೆ ರಾಸಾಯನಿಕ ಪದಾರ್ಥಗಳ ಬಳಕೆ ಅತಿಯಾಗಿ ವಿಜೃಂಭಿಸುವ ಕಾಲಘಟ್ಟದಲ್ಲಿ ಉಮೇಶ್ ಸಾವಯೊವ ಗೊಬ್ಬರ ಬಳಸಿ ಅತಿ ಹೆಚ್ಚು ಫಸಲನ್ನು ಕಾಣುತ್ತಿದ್ದಾರೆ.ಕೀಟಗಳ ಹಾವಳಿಗೆ ಮನೆಯಲ್ಲೆ ತಯಾರಿಸಿದ ಔಷಧ ಸಿಂಪಡಿಸಿ ಕೀಟನಾಶಕದಿಂದ ಮುಕ್ತರಾಗಿಸಿದ್ದಾರೆ.
ತೆಂಗಿನಲ್ಲೂ ಕ್ರಾಂತಿ
ಉಮೇಶ್ ತನ್ನ ಕೃಷಿ ಕಾಯಕದ ನಡುವೆಯೂ ಸಾಲಿಗ್ರಾಮ, ಸಾಸ್ತಾನ,ಬಾರಕೂರಿನ ಬೆಣ್ಣೆಕುದ್ರು ಭಾಗಗಳ ಪರಿಸರ ನಾಲ್ಕೈದು ತೆಂಗಿನ ತೋಟ ವಹಿಸಿಕೊಂಡು ಅದರ ನಿರ್ವಹಣೆ ಜೊತೆ ಅಲ್ಲಿಯೂ ಲಾಭದಾಯಕ ಕ್ರಾಂತಿಕಾರಿ ಹೆಜ್ಜೆಗಳನ್ನಿರಿಸಿದ್ದಾರೆ.
"ವಾಹನ ಚಾಲಕನಾಗಿ ನಂತರ ಸ್ವಂತ ವಾಹನದ ಮೂಲಕ ಆ ವ್ಯವಹಾರದಲ್ಲಿ ತೃಪ್ತನಾಗುತ್ತಿದ್ದೆ ಆದರೆ ನಂತರದ ದಿನಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಂಡುಕೊಂಡು ಇದೀಗ ಅದರಲ್ಲೆ ಸಂತುಷ್ಟನಾಗಿದ್ದೇನೆ ನನ್ನಂತ ಅನೇಕ ಯುವ ಮನಸ್ಸುಗಳು ಕೃಷಿ ಕಾಯಕ್ಕೆ ಬರಬೇಕು ಕೃಷಿ ಕಾರ್ಯದಂದ ಆದಾಯ,ನೆಮ್ಮದಿ ಆರೋಗ್ಯಯುತ ಜೀವನ ಕಾಣಲು ಸಾಧ್ಯವಿದೆ ,ನನ್ನ ಈ ಕಾರ್ಯಕ್ಕೆ ಪತ್ನಿ ಬಹುಮುಖ್ಯವಾಗಿ ಸಾಥ್ ನೀಡುತ್ತಿದ್ದಾರೆ ಸರಕಾರ ಕೃಷಿ ಕಾರ್ಯಕ್ಕೆ ಹೆಚ್ಷಿನ ಒತ್ತು ನೀಡಿದರೆ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಜನ ಆಸಕ್ತರಾಗಲು ಸಾಧ್ಯವಿದೆ" -ಉಮೇಶ್ ಪೂಜಾರಿ ಕಾರ್ಕಡ ಯುವ ಕೃಷಿಕರು ಸಾಲಿಗ್ರಾಮ