ಪುತ್ತೂರು,ಏ 10(MSP): ಇಲ್ಲಿನ ಚೇತನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಐದು ವರ್ಷದ ಬಾಲಕನೊಬ್ಬ ಏ.೯ ರ ಮಂಗಳವಾರ ಅಸುನೀಗಿದ್ದು, ಆಸ್ಪತ್ರೆಯ ಹಾಗೂ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿರೋದಾಗಿ ಪೋಷಕರು ಆರೋಪಿಸಿದ್ದಾರೆ. ಬಂಟ್ವಾಳ ತಾಲೂಕಿನ ಕಲ್ಲಡ್ಕದ ನೆಲ್ಲಿಗುಡ್ಡೆ ಬಳಿಯ ನಿವಾಸಿ ಹರಿಶ್ಚಂದ್ರ ಎಂಬವರ ಪುತ್ರ ಐದು ವರ್ಷದ ಯದೀಶ್ ಮೃತಪಟ್ಟ ಬಾಲಕ.
" ಯದೀಶ್ ಗೆ ಏ. ೮ ರಂದು ಜ್ವರ ಕಾಣಿಸಿಕೊಂಡಿದ್ದು, ಹೀಗಾಗಿ ಆತನನ್ನು ಚೇತನಾ ಆಸ್ಪತ್ರೆಯ ಮಕ್ಕಳ ತಜ್ಞ ಐ. ಶ್ರೀಕಾಂತ್ ರಾವ್ ಬಳಿ ತೋರಿಸಿ ಔಷದ ನೀಡಲಾಗಿತ್ತು. ಆದರೆ ಜ್ವರ ಕಡಿಮೆಯಾಗದ ಕಾರಣ ಏ. 9 ರಂದು ಮತ್ತೆ ಚಿಕಿತ್ಸೆಗೆಂದು ಕರೆದೊಯ್ದಾಗ ಆಸ್ಪತ್ರೆಯಲ್ಲಿ ದಾಖಲಿಸುವಂತೆ ತಿಳಿಸಿದರು. ಅಲ್ಲಿಯವರೆಗೆ ಲವಲವಿಕೆಯಿಂದಲೇ ಮಾತನಾಡುತ್ತಿದ್ದ ಯದೀಶ್, ಡಾ|ಶ್ರೀಕಾಂತ್ ಹೇಳಿದಂತೆ ಮಧ್ಯಾಹ್ನ ಗ್ಲುಕೋಸ್ ರೀತಿಯ ಔಷದ ನೀಡಿದ ಬಳಿಕ ತಕ್ಷಣ ಮಗು ವಾಂತಿ ಮಾಡಲಾರಂಭಿಸಿ ಮೂರ್ಛೆ ಹೋಗಿದ್ದು, ಈ ವೇಳೆ ಡಾ|ಶ್ರೀಕಾಂತ್ ಬರಹೇಳುವಂತೆ ವಿನಂತಿಸಿದರೂ, ಸೂಕ್ತ ಸಮಯಕ್ಕೆ ವೈದ್ಯರು ಆಗಮಿಸದೆ ಸಂಜೆ 7.30 ರ ವೇಳೆಗೆ ಅಗಮಿಸಿ ಪುತ್ರ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ನನ್ನ ಮಗನ ಸಾವಿಗೆ ವೈದ್ಯರ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷವೇ ಕಾರಣ " ಎಂದು ತಂದೆ ಹರಿಶ್ಚಂದ್ರ ಅವರು ಪುತ್ತೂರು ನಗರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.
ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ದ ಕ್ರಮ ಜರುಗಿಸುವಂತೆ ಪೋಷಕರು ಒತ್ತಾಯಿಸಿದ್ದು ಪುತ್ತೂರು ನಗರ ಪೊಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದಾರೆ.