ಮಂಗಳೂರು,ಸೆ 05 (DaijiworldNews/AK): ಹಲವು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರೀತಂ ಆಚಾರ್ಯ(38) ನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪ್ರೀತಂ ಆಚಾರ್ಯ ಜೆಪ್ಪಿನಮೊಗರು ಪೆಗಾಸಸ್ ಮುಂಭಾಗದಲ್ಲಿರುವ 'ಶ್ರೀ ರಕ್ಷಾ' ಚಿಂತನ ರಸ್ತೆಯ ನಿವಾಸಿಯಾಗಿದ್ದಾರೆ. ಈತನ ಮೇಲೆ ವಾರೆಂಟ್ ಜಾರಿಯಾಗಿತ್ತು. ಆದರೆ ಈತ ತಲೆಮರೆಸಿಕೊಂಡು ಮುಂಬೈಯ ಹೊಟೇಲ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ.
ಮಾಹಿತಿ ಮೇರೆಗೆ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್, ಡಿಸಿಪಿಗಳಾದ ಅಂಶುಕುಮಾರ್ ಮತ್ತು ದಿನೇಶ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಭಾರತಿ ಜಿ ನೇತೃತ್ವದ ಪೊಲೀಸ್ ತಂಡವು ಸಬ್ ಇನ್ಸ್ಪೆಕ್ಟರ್ ಹರೀಶ್ ಹೆಚ್ ವಿ, ಎಎಸ್ಐ ಉಲ್ಲಾಸ್ ಮಹಾಲೆ, ಹೆಡ್ ಕಾನ್ಸ್ಟೆಬಲ್ ಸುಧಾಕರ್ ಮತ್ತು ಕಾನ್ಸ್ಟ್ರೆಬಲ್ ಸಫ್ರೀನಾ ಅವರೊಂದಿಗೆ ಮುಂಬೈಗೆ ತೆರಳಿ ಆರೋಪಿ ಪ್ರೀತಂ ಆಚಾರ್ಯ ಬಂಧಿಸಿ ಸೆಪ್ಟೆಂಬರ್ 4 ರಂದು ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ನ್ಯಾಯಾಂಗ ಬಂಧನ ವಿಧಿಸಿದೆ.