ಬೆಳ್ತಂಗಡಿ, ಏ 10(MSP): ದ.ಕ.ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿರುವುದು ಅಸ್ತಿತ್ವ ಉಳಿಸಿಕೊಳ್ಳಲಿಕ್ಕೆ ಹೊರತು ಗೆಲ್ಲುವುದಕ್ಕಲ್ಲ. ಬಿಜೆಪಿ ಸ್ಪರ್ಧಿಸುತ್ತಿರುವುದು ಐತಿಹಾಸ ವಿಜಯ ದೊರಕಿಸಿಕೊಳ್ಳಲು ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.
ಅಳದಂಗಡಿ ಪೇಟೆಯಲ್ಲಿ ಮಂಗಳವಾರ ಸಂಜೆ ನಡೆದ ಪಕ್ಷದ ಬಹಿರಂಗ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತಲುಪದಿದ್ದರೂ ಮೋದಿ ಈಗಾಗಲೇ ಮನೆ ಮನಗಳ ಕದವನ್ನು ತಟ್ಟಿದ್ದಾರೆ. ಅಂದು ಗಾಂಧಿ ಇಂದು ಮೋದಿ. ಇಬ್ಬರೂ ಗುಜರಾತಿನವರು. ಮೋದಿ ಅಂದರೆ ಮಾಸ್ಟರ್ ಆಫ್ ಡಿಫೆನ್ಸ್ ಇಂಡಿಯಾ, ಮಾಸ್ಟರ್ ಆಫ್ ಡೆವಲಪಿಂಗ್ ಇಂಡಿಯಾ, ಮಾಸ್ಟರ್ ಆಫ್ ಡೇರಿಂಗ್ ಇಂಡಿಯಾ ಎಂದು ವಿಶ್ಲೇಷಿಸಿದ ಅವರು ಕಳೆದ ೫೦ ವರ್ಷಗಳಲ್ಲಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡುವಲ್ಲಿ ಕಾಂಗ್ರೆಸ್ ಸಂಪೂರ್ಣ ಸೋತಿರುವುದನ್ನು ಬೊಟ್ಟು ಮಾಡಿದರು.
ಯೋಧರಿಗೆ ಯೋಗ್ಯ ಸ್ಮಾರಕ ಕಟ್ಟಲುಯೋಗ್ಯತೆಯಿಲ್ಲದ್ದು ಕಾಂಗ್ರೇಸ್ ಪಕ್ಷ. ಜಿಲ್ಲೆಯಲ್ಲೀಗ ಕೋಮು ಗಲಭೆಗಳು ಬಂದ್ ಆಗಿವೆ. ಜಿಲ್ಲೆಯ 68,000 ಮಂದಿಗೆ ಉಚಿತ ಅಡುಗೆ ಅನಿಲ ನೀಡಲಾಗಿದೆ. ಇಂದು ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೇಸ್ ಫೈಟ್ ಇಲ್ಲ. ಕಾಂಗ್ರೇಸ್ನವರು ಅಸ್ತಿತ್ವಕ್ಕಾಗಿ ಸ್ಪರ್ಧಿಸುತ್ತಿದ್ದಾರೆಯೇ ಹೊರತು ಗೆಲ್ಲುವ ಸಾಧ್ಯತೆ ಇಲ್ಲ ಎಂದು ಗೊತ್ತಿದೆ. ನಾವು ಐತಿಹಾಸಿಕ ಜಯ ದಾಖಲಿಸಿಕೊಳ್ಳಲು ಸಿದ್ಧರಾಗಿದ್ದೇವೆ. ಭಾರತೀಯತೆಯೇ ಬಿಜೆಪಿಯ ಡಿಎನ್ಎ. ಜಗತ್ತಿನ ನಾಯಕನಾಗಿ ಮೋದಿ ಕಂಗೊಳಿಸಲಿದ್ದಾರೆ. ಮೋದಿ ಎಂದರೆ ಪೊಲಿಟಿಕಲ್ ಕರೆಂಟ್, ಮೋದಿ ಅಂದರೆ ಪೊಲಿಟಿಕಲ್ ಮಿಸೈಲ್ ಇವರ ಎದುರು ಕಾಂಗ್ರೆಸ್ ಛಿದ್ರವಾಗಲಿದೆ. ಸಂಪೂರ್ಣ ಭಾರತದಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಲಿದೆ ಎಂದರು.
ಶಾಸಕ ಹರೀಶ ಪೂಂಜ ಅವರು, ವಿಧಾನಸಭೆಯ ವೇಳೆ ಈಗಿನ ಕಾಂಗ್ರೆಸ್ ಅಭ್ಯರ್ಥಿ ಯುವಕನಾಗಿ ಕಾಣದೆ ಈಗ ಅವರಿಗೆ ಕಂಡು ಬರುತ್ತಿರುವುದು ವಿಪರ್ಯಾಸ. ನಾವೆಲ್ಲಾ ಸೇರಿ ಮತ್ತೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕಾಗಿದೆ ಎಂದರು.
ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಶಿವಭಟ್ ಕಟ್ಟೂರು, ಅಳದಂಗಡಿ ಹಾಲು ಉತ್ಪಾದಕ ಸ.ಸಂಘದ ಅಧ್ಯಕ್ಷ ಗಣೇಶ ದೇವಾಡಿಗ, ಬಿಜೆಪಿ ಮಂಡಲಾ ಅಧ್ಯಕ್ಷ ಜಯಂತ ಕೋಟ್ಯಾನ್, ಕಾರ್ಯದರ್ಶಿ ಸೀತಾರಾಮ ಬಿ.ಎಸ್., ಹಿತೇಶ್ ಕಾಪಿನಡ್ಕ ಉಪಸ್ಥಿತರಿದ್ದರು. ಸಭೆಯ ಸಂಚಾಲಕ ಸದಾನಂದ ಪೂಜಾರಿ ಉಂಗಿಲಬೈಲು ಸ್ವಾಗತಿಸಿದರು. ರಾಮಣ್ಣ ಸಾಲಿಯಾನ್ ವಂದಿಸಿದರು.