ಮಂಗಳೂರು, ಸೆ 04 (DaijiworldNews/MS): ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಏರ್ಪಾಡು ಮಾಡಲಾಗಿತ್ತು.ಮುದ್ದುಕೃಷ್ಣ, ಬಾಲಕೃಷ್ಣ, ಕಿಶೋರ್ ಕೃಷ್ಣ, ವಿಭಾಗಗಳಲ್ಲಿ ಏರ್ಪಾಡು ಮಾಡಲಾಗಿದ್ದ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಟ್ ನಿರ್ದೇಶಕರಾದ ಫಾದರ್ ರಿಚರ್ಡ್ ಆಗಮಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಫಾದರ್ ದೀಪ ಪ್ರಜ್ವಲನೆಯ ಮುಖಾಂತರ ಮಾಡಿ ಮಾತನಾಡಿದ ಅವರು, ಈ ಸಮಾರಂಭ ಸರ್ವಧರ್ಮ ಸಮಾನತೆಯನ್ನು ಸೂಚಿಸುತ್ತದೆ. ಮಕ್ಕಳಲ್ಲಿ ಭೌತಿಕ ಶಿಕ್ಷಣದ ಜೊತೆಗೆ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಬಹಳ ಇದೆ. ನಾವೆಲ್ಲ ಒಂದೇ, ಒಬ್ಬ ಪರಮಾತ್ಮನ ಮಕ್ಕಳು ಎಂದು ತಿಳಿದಾಗ ಮಾತ್ರ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಎನ್ ಎಂಪಿಟಿ ಶಾಲೆಯ ನಿವೃತ್ತ ಶಿಕ್ಷಕರು ಚಿದಾನಂದ, ಅಚಲ್ ಫಾರ್ಮ್ ನಿರ್ದೇಶಕರಾದ ದೀಪಕ್ ಭಟ್ , ದೇವರಾಜ್ ಅರಸ್ ಕಾರ್ಪೊರೇಷನ್'ನ ಜಿಲ್ಲಾ ನಿರ್ವಾಹಕರಾಗಿರುವ ಪವನ್ ಕುಮಾರ್ ಆಗಮಿಸಿದ್ದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಭಾರತದ ಸ್ವರ್ಣಿಮ ಸಮಯವನ್ನು ಸೂಚಿಸುತ್ತದೆ. ಶ್ರೀ ಕೃಷ್ಣ, ಸರ್ವ ಗುಣ ಸಂಪನ್ನ, 16 ಕಲಾಸಂಪೂರ್ಣ, ಸಂಪೂರ್ಣ ನಿರ್ವಿಕಾರಿಯಾಗಿದ್ದಾನೆ. ಇಂತಹ ಒಳ್ಳೆ ಗುಣಧಾರಣೆ ಮಾಡಿಕೊಳ್ಳುವುದಕ್ಕಾಗಿ ಬ್ರಹ್ಮಕುಮಾರಿ ಸಂಸ್ಥೆಯಲ್ಲಿ ಸ್ವಯಂ ನಿರಾಕಾರ ಪರಮ ಜ್ಯೋತಿ ಪರಂಪಿತ ಶಿವ ಪರಮಾತ್ಮನು ಉಚಿತವಾಗಿ ಈಶ್ವರಿಯ ಜ್ಞಾನವನ್ನು ನೀಡುತ್ತಿದ್ದಾರೆ ಎಂದು ಈಶ್ವರಿಯ ಸಂದೇಶದಲ್ಲಿ ಮಂಗಳೂರು ಬ್ರಹ್ಮಕುಮಾರಿಸ್ ಸಂಚಾಲಕರಾದ ಬ್ರಹ್ಮಕುಮಾರಿ ವಿಶ್ವೇಶ್ವರಿ, ತಿಳಿಸಿದರು.
ಬ್ರಹ್ಮಕುಮಾರಿ ಪ್ರಭಾ ಸಂಸ್ಥೆಯ ಪರಿಚಯ ಹೇಳಿದರು ಬ್ರಹ್ಮಕುಮಾರಿ ಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಬ್ರಹ್ಮಕುಮಾರಿ ಅಂಬಿಕಾ ಸ್ವಾಗತಿಸಿದರು.