ಮಲ್ಪೆ, ಸೆ 03 (DaijiworldNews/HR): ಕಳೆದೆರಡು ದಿನಗಳಿಂದ ಮಲ್ಪೆ ಬಂದರಿನಲ್ಲಿ ಬೋಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು ಬೋಟ್ ನ ಸ್ಟೋರೇಜ್ ನಲ್ಲಿರುವ ಮೀನು ಖಾಲಿ ಮಾಡುತ್ತಿರುವಾಗ ಮೀನಿನ ವಿಷಾನಿಲದಿಂದಾಗಿ ಉಸಿರಾಟದ ಸಮಸ್ಯೆಯಾಗಿ ಪ್ರಜ್ನಾಹೀನರಾಗುತ್ತಿರುವ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿವೆ.
ಇಂತಹ ಘಟನೆಯಿಂದಾಗಿ ಎರಡು ದಿನದ ಅಂತರ ದಲ್ಲಿ ನಾಲ್ಕು ಜನರ ಜೀವ ವನ್ನು ಉಳಿಸುವಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆ ಯವರು ಯಶಸ್ವಿಯಾದರು.
ಇಂತಹದೇ ಘಟನೆ ಶನಿವಾರ ಕೂಡಾ ಮಲ್ಪೆ ಬಂದರಿನಲ್ಲಿ ನಡೆದಿದೆ. ಪ್ರಜ್ನಾಹೀನನಾಗಿ ಬಿದ್ದಿದ್ದ ಯುವಕನನ್ನು ಮೇಲಕೆತ್ತಲು ಈಶ್ವರ್ ಮಲ್ಪೆ ಬೋಟ್ ನ ಸ್ಟೋರೇಜ್ ಗೆ ಇಳಿದಿದ್ದು , ವಿಷಾನಿಲದಿಂದಾಗಿ ಈಶ್ವರ್ ಮಲ್ಪೆಯವರು ಕೂಡ ಉಸಿರಾಟದ ಸಮಸ್ಯೆಯಾಗಿ ಅಸ್ವಸ್ಥಗೊಂಡು ಪ್ರಜ್ನೆತಪ್ಪಿ ಬಿದ್ದು ಕೆಲಕಾಲ ಬೋಟ್ ನಲ್ಲಿ ಸಾವರಿಸಿಕೊಂಡು ಕಾರ್ಯಾಚರಣೆಯನ್ನು ಮುಂದುವರೆಸಿದರು.
ತನ್ನ ಜೀವಕ್ಕೆ ತೊಂದರೆಯಾದರೂ ಕೂಡ ಹಿಂದೇಟು ಹಾಕದೆ ಆ ಯುವಕನನ್ನು ಮೇಲಕ್ಕೆತ್ತಿ ತನ್ನ ಆಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಸಾಗಿಸುವಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಯಶಸ್ವಿಯಾದರು. ಈಶ್ವರ್ ಮಲ್ಪೆಯವರು ಕೂಡ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಈಗ ಹುಷಾರಾಗಿದ್ದಾರೆ.
ಮಲ್ಪೆ ಬಂದರಿನಲ್ಲಿ ಮತ್ತೆ ಮತ್ತೆ ಇಂತಹ ಅನಾಹುತಗಳು ಸಂಭವಿಸುತಿದ್ದು ಕಾರ್ಮಿಕರ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರ ಮೂಲಕ ಜನರ ಜೀವಕ್ಕೆ ಅಪಾಯವಾಗದಂತೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಈಶ್ವರ್ ಮಲ್ಪೆ ವಿನಂತಿಸಿದ್ದಾರೆ.