ಮಂಗಳೂರು, ಸೆ 02 (DaijiworldNews/MS): ಜಲ ಮಾಲಿನ್ಯ ನಿವಾರಣ ಮತ್ತು ನಿಯಂತ್ರಣ ಕಾಯ್ದೆ 1974ರ ಅಧಿನಿಯಮ ಕಲಂ 33ರಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ಮಾಡಿರುವ ಹಾಗೂ ಬಣ್ಣ ಲೇಪಿತವಾದ ಗೌರಿ ಹಾಗೂ ಗಣೇಶ ವಿಗ್ರಹಗಳನ್ನು ರಾಜ್ಯದ ಕೆರೆ, ನದಿ, ಕಾಲುವೆಬಾವಿ ಹಾಗೂ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ.
ಅದರಂತೆ ರಾಜ್ಯ ಹೈಕೋರ್ಟ್ 2017ರ ಜನವರಿ 31ರಂದು ಹೊರಡಿಸಿರುವ ಆದೇಶದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿದ ಅಧಿಸೂಚನೆಯನ್ನು ಕ್ರಮಬದ್ದಗೊಳಿಸಿ, ಅದನ್ನು ಉಲ್ಲಂಘಿಸಿದ್ದಲ್ಲೀ ಐಪಿಸಿ 1860ರ ಪ್ರಕಾರ ಕ್ರಮಕೈಗೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಗಣೇಶ ಮತ್ತು ಗೌರಿ ವಿಗ್ರಹಗಳ ತಯಾರಿಕೆ ಘಟಕ ಹಾಗೂ ಮಾರಾಟ ಮಾಡುವ ಮಳಿಗೆಗಳನ್ನು ಪರೀಕ್ಷಿಸಿದಾಗ, ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಗಣೇಶ ಮತ್ತು ಗೌರಿ ವಿಗ್ರಹಗಳ ತಯಾರಿಸುತ್ತಿರುವುದು ಹಾಗೂ ಬಣ್ಣದ ವಿಗ್ರಹಗಳನ್ನು ಮಾರಾಟಕ್ಕಿಟ್ಟಿರುವುದನ್ನು ಗಮನಿಸಲಾಗಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಾದ ಗಣೇಶ ಮತ್ತು ಗೌರಿ ಮತ್ತು ಬಣ್ಣಲೇಪಿತವಾದ ವಿಗ್ರಹಗಳು ಹಾಗೂ ಈಗಾಗಲೇ ತಯಾರಿಸಲಾಗಿರುವ ಅಥವಾ ಇತರೆ ರಾಜ್ಯಗಳಿಂದ ಆಮದು ಮಾಡಿಕೊಂಡ ವಿಗ್ರಹಗಳನ್ನು ವಶಕ್ಕೆ ತೆಗೆದುಕೊಂಡು ಅವುಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ ಲ್ಯಾಂಡ್ ಫೀಲ್ಸೈಟ್ ನಲ್ಲಿ ವಿಲೇವಾರಿ ಮಾಡಬೇಕೆಂದು ನಗರದ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಪತ್ರದ ಮೂಲಕ ನಿರ್ದೇಶನ ನೀಡಲಾಗಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ಗಣೇಶ ಮತ್ತು ಗೌರಿ ವಿಗ್ರಹಗಳಂತೆ ಮಾರಾಟ ಮಾಡುವುದನ್ನು ನಿಷೇಧಿಸಲು, ತಡೆಯಲು ಹಾಗೂ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ತಯಾರಿಸುವುದು ಅಥವಾ ಮಾರಾಟ ಮಾಡುವ ವ್ಯಕ್ತಿ ಅಥವಾ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲು ಜಿಲ್ಲೆಯ ನಗರಸ್ಥಳೀಯ ಸಂಸ್ಥೆಗಳಿಗೆ ಈ ಮೂಲಕ ಆದೇಶಿಸಲಾಗಿದೆ.
ಜಿಲ್ಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣಲೇಪಿತ ಗಣೇಶ ಮತ್ತು ಗೌರಿ ವಿಗ್ರಹಗಳನ್ನು ತಯಾರಿಸುವುದು ಹಾಗೂ ಮಾರಾಟ ಮಾಡುವುದನ್ನು ಸಮಪರ್ಕವಾಗಿ ನಿಷೇಧಿಸುವುದನ್ನು ಅನುಷ್ಟಾನಗೊಳಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಮುಲ್ಲೈ ಮುಗಿಲನ್ ಎಂ.ಪಿ., ಅವರು ಆದೇಶಿಸಿದ್ದಾರೆ.