ಉಡುಪಿ, 10(MSP): ಮೀನುಗಾರಿಕೆ ಬೋಟ್ ಗಳು ಅವಘಡಕ್ಕೆ ಸಿಲುಕಿದಾಗ ಸ್ಪಷ್ಟ ಸುಳಿವು ನೀಡುವಂತಹ ಸಲಕರಣೆ ಅಳವಡಿಸಲು ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದೇವೆ ಎಂದು ಮೀನುಗಾರಿಕಾ ಸಚಿವ ವೆಂಕಟ ರಾವ್ ನಾಡಗೌಡ ಹೇಳಿದ್ದಾರೆ.
ಉಡುಪಿಯಲ್ಲಿ ಏ.10 ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿದ ಸಚಿವರು, ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಬೋಟ್ ಸಮೇತ ನಾಪತ್ತೆಯಾದ ಏಳು ಜನ ಮೀನುಗಾರರ ಹುಡುಕಾಟಕ್ಕೆ ಗರಿಷ್ಠ ಪ್ರಯತ್ನ ನಡೆಸಿದ್ದೇವೆ.ಆದರೆ ಈ ತನಕ ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಈಗಾಗಲೇ ನಾಪತ್ತೆಯಾದ ಮೀನುಗಾರರ ಕುಟುಂಬದವರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದ್ದೇವೆ. ಸರಕಾರದಿಂದ ತಾತ್ಕಾಲಿಕವಾಗಿ ಸದ್ಯ ಒಂದು ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.
ನಾಪತ್ತೆಯಾದ ಮೀನುಗಾರರ ಹುಡುಕಾಟಕ್ಕೆ ರಾಜ್ಯ ಸರಕಾರ ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡಿದೆ. ನಾವು ಈ ಬಗ್ಗೆ ಗಂಭೀರ ಚರ್ಚೆಗೆ ಕೇಂದ್ರ ಗೃಹ ಸಚಿವರ ಭೇಟಿಗೆ ಸಮಯ ಕೇಳಿದ್ದೆವು. ಆದರೆ ನಮಗೆ ಸಚಿವರು ನಮಗೆ ಸಮಯಾವಕಾಶ ನೀಡಲಿಲ್ಲ ಎಂದು ಆರೋಪ ಮಾಡಿದರು.
ಸುವರ್ಣ ತ್ರಿಭುಜ ಅವಘಡದ ಬಳಿಕ ಇಸ್ರೊ ಕೋರಿಕೆ ಮೇರೆಗೆ ಬೋಟ್ ಗಳಿಗೆ ಒಂದು ಸಲಕರಣೆ ಅಳವಡಿಕೆಗೆ ನಿರ್ಧಾರ ಮಾಡಿದ್ದೇವೆ. ಇದಕ್ಕಾಗಿ ಬಜೆಟ್ ನಲ್ಲಿ ಮೂರು ಕೋಟಿ ರೂ. ಮೀಸಲಿಟ್ಟಿದ್ದೇವೆ. ಹೀಗಾಗಿ ಇನ್ನು ಮುಂದೆ ಬೋಟ್ ಅವಘಡ ಸಂಭವಿಸಿದರೆ ಅದರ ನಿಖರ ಮಾಹಿತಿ ಸಿಗುತ್ತದೆ. ಚುನಾವಣೆ ಬಳಿಕ ಮೀನುಗಾರ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಬೋಟ್ ಗಳಿಗೆ ಸಲಕರಣೆ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ವೇಳೆ ಬಿಜೆಪಿಯವರ ಆರೋಪಕ್ಕೆ ಸಿಡಿಮಿಡಿಗೊಂಡ ಆದ ಸಚಿವರು, ಅನಂತಕುಮಾರ್ ಹೆಗಡೆ ಊರಲ್ಲಿ ಐವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಆದರೆ ಅವರು ಒಬ್ಬ ಮೀನುಗಾರರ ಮನೆಗೆ ಭೇಟಿ ನೀಡಿದ್ದಾರಾ? ಸಂಸದರಾಗಿ ಅನಂತಕುಮಾರ್ ಹೆಗಡೆಗೆ ಜವಾಬ್ದಾರಿ ಇಲ್ಲವೇ? ಆಕ್ರೋಶ ವ್ಯಕ್ತಪಡಿಸಿದ್ರು.