ಉಡುಪಿ, ಸೆ 02 (DaijiworldNews/HR): ಮೊದಲೇ ಕಿರಿದಾಗಿ ಸಾಗುವ ಉಡುಪಿ ನಗರದ ರಸ್ತೆಗಳಲ್ಲಿ ಒಂದೆಡೆ ಪಾರ್ಕಿಂಗ್ ಸಮಸ್ಯೆ, ಪ್ರತಿನಿತ್ಯ ಸಾವಿರಾರು ವಾಹನಗಳ ಆಟಾಟೋಪ, ಸಮರ್ಪಕವಾಗಿಲ್ಲದ ಪಾದಾಚಾರಿ ಮಾರ್ಗ ಇವೆಲ್ಲದರ ನಡುವೆ ರಸ್ತೆ ಬದಿಯಲ್ಲಿ ಸಾಗುವ ಪಾದಾಚಾರಿಗಳಿಗೆ ಇದೀಗ ಮತ್ತೊಂದು ವಿಘ್ನ ಎದುರಾಗಿದೆ. ಉಡುಪಿಯ ಪ್ರಮುಖ ವೃತ್ತಗಳಲ್ಲಿ ಒಂದಾಗಿರುವ ಹಳೆ ಡಯಾನ ವೃತ್ತದ ಪಾದಾಚಾರಿ ಮಾರ್ಗದಲ್ಲಿ ರಾಶಿ ಹಾಕಿರುವ ಸಿಗ್ನಲ್ ಲೈಟ್ ನ ಕಂಬಗಳು ಈ ಬಾಗದಲ್ಲಿ ಸಂಚರಿಸುವ ಪಾದಾಚಾರಿಗಳಿಗೆ ದುಸ್ವಪ್ನವಾಗಿ ಕಾಡುತ್ತಿವೆ.
ಉಡುಪಿ ನಗರದ ಪ್ರಮುಖ ಭಾಗಗಳಲ್ಲಿ ನಗರಸಭೆ ಯ ವತಿಯಿಂದ ಸಿಗ್ನಲ್ ಅಳವಡಿಕೆ ಮತ್ತು ಇನ್ನಿತರ ಅಭಿವೃದ್ದಿ ಕಾಮಗಾರಿಗಳನ್ನು ಒಳಗೊಂಡ ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಸಿದ್ದಪಡಿಸಲಾಗಿತ್ತು. ಇದರ ಅನ್ವಯ ಉಡುಪಿ ನಗರ, ಮಣಿಪಾಲ ಮತ್ತು ನಗರದ ಹೊರವಲಯದ ಅಂಬಾಗಿಲು ಬಳಿ ಎಲ್ ಇ ಡಿ ಸ್ಕ್ರೀನ್ ಸಹಿತ ಸಿಗ್ನಲ್ ಲೈಟ್ ಅಳವಡಿಕೆ, 5ಜಿ ವೈಫೈ ಸೌಲಭ್ಯ, ಸ್ಮಾರ್ಟ್ ಆಧುನಿಕ ಬಸ್ ನಿಲ್ದಾಣ, ಇನ್ನೂ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಯೋಜಿಸಲಾಗಿತ್ತು. ಇದರ ಅನ್ವಯ ನಗರದ ವಿವಿದೆಡೆಗಳಲ್ಲಿ ಗುಂಡಿ ತೋಡಿ, ಅಡಿಪಾಯವನ್ನು ಕೂಡಾ ಹಾಕಲಾಗಿತ್ತು. ಆದರೆ ಇದೀಗ ಕಾಮಗಾರಿಗೆ ಗ್ರಹಣ ಹಿಡಿದಿದ್ದು, ಸಿಗ್ನಲ್ ಲೈಟ್ ಅಳವಡಿಕೆ ಸೇರಿದಂತೆ ಇಡಿಯ ಸ್ಮಾರ್ಟ್ ಸಿಟಿ ಯ ಕಾಮಗಾರಿಯೇ ನೆನೆಗುದಿಗೆ ಬಿದ್ದಿದೆ.
ಮಣಿಪಾಲದ ಟೈಗರ್ ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ ಗಳನ್ನು ಅಳವಡಿಸಿ ಕೆಲವೊಂದು ಸಮಯದ ಕಾಲ ಪ್ರಾಯೋಗಿಕವಾಗಿ ಬಳಕೆ ಯನ್ನು ಕೂಡಾ ಮಾಡಲಾಗಿತ್ತು ಆದರೆ ಇದೀಗ ಹಲವಾರು ತಿಂಗಳುಗಳಿಂದ ಇಲ್ಲಿ ಕೇವಲ ಬೃಹತ್ ಗಾತ್ರದ ಸಿಗ್ನಲ್ ಕಂಬಗಳು ಮಾತ್ರ ಇದ್ದು, ಅವುಗಳ ಬಳಕೆಯಾಗುತ್ತಿಲ್ಲ. ಅದೇ ರೀತಿ ಮಣಿಪಾಲದ ಸಿಂಡಿಕೇಟ್ ಸರ್ಕಲ್, ಉಡುಪಿಯ ಕಲ್ಸಂಕ ಜಂಕ್ಷನ್ ನಲ್ಲಿ ಕೂಡಾ ಸಿಗ್ನಲ್ ಲೈಟ್ ನ ಬೃಹತ್ ಗಾತ್ರದ ಕಂಬಗಳನ್ನು ಅಳವಡಿಕೆ ಮಾಡಲಾಗಿದ್ದು ಆ ಬಳಿಕ ಇವುಗಳತ್ತ ಯಾರೂ ಕೂಡಾ ಕಣ್ಣೆತ್ತಿ ಕೂಡಾ ನೋಡಿಲ್ಲ.
“ಈಗಾಗಲೇ ಉಡುಪಿ ನಗರಸಭೆ ವತಿಯಿಂದ ನಗರ ಪ್ರದೇಶದ ಸರ್ಕಲ್ ಗಳಲ್ಲಿ ಸಿಗ್ನಲ್ ಕಂಬ ಹಾಕಲು ಯೋಜಿಸಲಾಗಿದೆ. ಇದಕ್ಕೆ ಬೇಕಾದ ಕಾಂಕ್ರೀಟ್ ಪೀಠವನ್ನು ಕೂಡಾ ಈಗಾಗಲೇ ರಚನೆ ಮಾಡಲಾಗಿದೆ. ಅದನ್ನು ಕೂಡಾ ಸೂಕ್ತ ರೀತಿಯಲ್ಲಿ ನಿರ್ಮಾಣ ಮಾಡಿಲ್ಲ. ನಗರದಲ್ಲಿ ಈ ಮೊದಲೇ ಕಿರಿದಾದ ರಸ್ತೆಗಳು ಇದ್ದು, ಅವುಗಳ ನಡುವೆ ಇಂತಹ ಬೃಹತ್ ಗಾತ್ರದ ಸಿಗ್ನಲ್ ಲೈಟ್ ನ ಕಬ್ಬಿಣದ ಕಂಬಗಳನ್ನು ಹಾಕಿ ಜನ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈಗಾಗಲೇ ಹಾಕಿರುವ ಪೀಠಗಳು ಕೂಡಾ ಕ್ರಮಬದ್ದವಾಗಿಲ್ಲ. ಮಣಿಪಾಲದಲ್ಲಿ ಹಾಕಿರುವ ಸಿಗ್ನಲ್ ಲೈಟ್ ಗಳನ್ನು ಬಳಕೆ ಕೂಡಾ ಮಾಡುತಿಲ್ಲ. ನಗರಸಭೆ, ಜಿಲ್ಲಾಡಳಿತ ವಾಹನ ಮತ್ತು ಪಾದಾಚಾರಿಗಳಿಗೆ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು” ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
ಉಡುಪಿಯ ಪ್ರಮುಖ ವೃತ್ತವಾಗಿರುವ ಹಳೆ ಡಯಾನ ವೃತ್ತದ ಬಳಿ ಸಿಗ್ನಲ್ ಲೈಟ್ ಅಳವಡಿಕೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಸಿಗ್ನಲ್ ಲೈಟ್ ನ ಬೃಹತ್ ಗಾತ್ರದ ಕಂಬಗಳನ್ನು ರಸ್ತೆ ಬದಿಯ ಪಾದಾಚಾರಿ ಮಾರ್ಗದಲ್ಲಿ ಇಡಲಾಗಿದೆ, ಇದು ಅಪಾಯದ ಗಂಭೀರತೆಯನ್ನು ಹೆಚ್ಚಿಸಿದೆ. ಈ ಭಾಗದ ಅತಿ ಹೆಚ್ಚು ಜನರು ಓಡಾಡುವ ಪ್ರದೇಶವಾಗಿದ್ದು ಹತ್ತಿರದಲ್ಲಿಯೇ ವಿವಿಧ ವ್ಯಾವಹಾರಿಕ ಸಂಸ್ಥೆಗಳು, ತರಕಾರಿ ಮಾರುಕಟ್ಟೆ, ಶಾಲೆ, ಪಿಯು ಕಾಲೇಜು ಕೂಡಾ ಇದರ ಸುತ್ತಮುತ್ತವೇ ಇದ್ದು ಜನನಿಬಿಡ ಪ್ರದೇಶ ವಾಗಿದೆ. ಸುಮಾರು ಒಂದು ತಿಂಗಳಿನಿಂದ ಈ ಸಿಗ್ನಲ್ ಲೈಟ್ ಕಂಬಗಳು ರಸ್ತೆಯ ಎರಡೂ ಬದಿಯಲ್ಲಿ ಇಡಲಾಗಿದ್ದು ಹೇಳುವವರು ಕೇಳುವವರು ಇಲ್ಲದಂತಾಗಿದೆ.