ಮಂಗಳೂರು, ಸ 02 (DaijiworldNews/HR): ದಕ್ಷಿಣ ಕನ್ನಡ ಬಸ್ ನಿರ್ವಾಹಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ನೇತೃತ್ವದಲ್ಲಿ ನಂತೂರಿನಲ್ಲಿ ಶನಿವಾರ ಬಸ್ ಚಾಲಕರು ಮತ್ತು ಕಂಡಕ್ಟರ್ಗಳಿಗೆ ಪ್ರಯಾಣಿಕರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಯಿತು.
ಕಂಡಕ್ಟರ್ ಸಾವಿಗೀಡಾದ ಬಳಿಕ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಈಗಾಗಲೇ ಬಸ್ ಗಳಿಗೆ ಬಾಗಿಲು ಕಡ್ಡಾಯಗೊಳಿಸಿದ್ದು, ಫುಟ್ಬೋರ್ಡ್ ಪ್ರಯಾಣಕ್ಕೆ ಸಂಬಂಧಿಸಿದಂತೆ 163 ಪ್ರಕರಣಗಳನ್ನು ಮತ್ತು ಸಾರ್ವಜನಿಕ ದೂರಿನ ಆಧಾರದ ಮೇಲೆ 24 ಪ್ರಕರಣಗಳನ್ನು ದಾಖಲಿಸಲಾಗಿದೆ.
ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಖಾಸಗಿ ಬಸ್ಸಿನ ಕಂಡಕ್ಟರ್ಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಚಾಲಕರು ಮತ್ತು ಕಂಡಕ್ಟರ್ಗಳು ಪ್ರಯಾಣಿಕರನ್ನು ಗೌರವಿಸಬೇಕು, ಫುಟ್ಬೋರ್ಡ್ನಲ್ಲಿ ಪ್ರಯಾಣಿಸಬಾರದು ಮತ್ತು ಡ್ರೆಸ್ ಕೋಡ್ಗಳನ್ನು ಸಹ ಕಾಪಾಡಿಕೊಳ್ಳಬೇಕು ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಬಸ್ಸಿನಲ್ಲಿ ಮ್ಯೂಸಿಕ್ ಸಿಸ್ಟಂ ಹಾಕದಂತೆ, ಚಲೋ ಕಾರ್ಡ್ ಬಳಸದಂತೆ, ಸಮವಸ್ತ್ರ ಕಡ್ಡಾಯವಾಗಿ, ಬಸ್ ನಿಲ್ದಾಣ ಹೊರತುಪಡಿಸಿ ಬೇರೆ ಕಡೆಗಳಲ್ಲಿ ನಿಲ್ಲಿಸದಂತೆ ತಿಳಿಸಲಾಗಿದೆ.
ಈ ವೇಳೆ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.