ಕುಂದಾಪುರ, ಸೆ. 01 (DaijiworldNews/SM): ವರಾಹಿ ನೀರಾವರಿ ಯೋಜನೆಯ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ವಾರಾಹಿ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಶಾಸಕರು, ಕಾಮಗಾರಿ ಸಮರ್ಪಕವಾಗಿ, ಕ್ಲಪ್ತ ಸಮಯದಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಯೋಜನೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ವಾರಾಹಿ ಅಧಿಕಾರಿಗಳು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ಮತ್ತು ಉಡುಪಿ ತಾಲೂಕಿನ ಗ್ರಾಮಗಳ ಒಟ್ಟು ಸುಮಾರು 15,702 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಲು ರೂಪಿಸಲಾಗಿದೆ. ನೀರಾವರಿ ಯೋಜನೆಯ ಪರಿಷ್ಕೃತ ಯೋಜನಾ ಮೊತ್ತ ರೂ. 178.50 ಕೋಟಿಗಳಾಗಿದ್ದು, ಆಗಸ್ಟ್-2023ರ ಅಂತ್ಯಕ್ಕೆ ರೂ. 1302.80 ಕೋಟಿಗಳ ವಾರಾಹಿ ನೀರಾವರಿ ಯೋಜನೆಯಡಿ ಉದ್ದೇಶಿತ 15702 ಹೆ. ಅಚ್ಚುಕಟ್ಟು ಪ್ರದೇಶದ ಪೈಕಿ ಸೆಪ್ಟೆಂಬರ್-2022ರ ಅಂತ್ಯದವರೆಗೆ ಸುಮಾರು 610 ಹೆ. ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.
ಪ್ರಸ್ತುತ ವಾರಾಹಿ ನೀರಾವರಿ ಯೋಜನೆಯಡಿ ಡೈವರ್ಶನ್ ವಿಯರ್, ವಾರಾಹಿ ಬಲದಂಡೆ ಸಾಮಾನ್ಯ ಕಾಲುವೆ ಸರಪಳಿ: 1.01 ರಿಂದ 18,725 ಎಡದಂಡೆ ನಾಲೆ-0.00 ರಿಂದ 44.35 ಕಿ.ಮೀನ ಕಾಮಗಾರಿಗಳು ಪೂರ್ಣಗೊಂಡಿರುತ್ತದೆ. ವಾರಾಹಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. ವಾರಾಹಿ ಎಡದಂಡೆ ನಾಲೆಯ ವಿತರಣಾ ನಾಲೆ-29, 32, 45, 46 ಮತ್ತು 47ಕ್ಕೆ ಸಂಬಂಧಿಸಿದಂತೆ ಅಂದಾಜುಪಟ್ಟಿ ತಯಾರಿಕಾ ಹಂತದಲ್ಲಿರುತ್ತದೆ ಎನ್ನುವ ಮಾಹಿತಿ ನೀಡಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಹಿಂದಿನ ಸರ್ಕಾರದ ಅವಧಿಯಲ್ಲಿ ವಾರಾಹಿ ನಾಲೆ ನಿರ್ಮಾಣಕ್ಕೆ 54.77 ಕೋಟಿ, ರಸ್ತೆ, ಟ್ಯಾಂಕ್ಗೆ 21 ಕೋಟಿ, ಎಸ್.ಸಿ.ಪಿ., ಎಸ್ಜಿಪಿ ಕೆಲಸಕ್ಕೆ 6 ಕೋಟಿ, ಸರ್ವೆಗೆ 1 ಕೋಟಿ, ಒಟ್ಟು 81.88 ಕೋಟಿ ಮಂಜೂರಾತಿಯಾಗಿತ್ತು. ಈಗ ಈ ಸರ್ಕಾರ ಅನುದಾನವನ್ನು ತಡೆ ಹಿಡಿದಿರುವುದರಿಂದ ಮುಂದಿನ ಆದೇಶ ಬರುವ ತನಕ ಕಾಯಬೇಕಾಗಿದೆ ಎಂದರು.
ವಾರಾಹಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.