ಮಂಗಳೂರು, ಆ 31 (DaijiworldNews/SM): ನಗರದ ನಂತೂರು ವೃತ್ತದ ಸಮೀಪದಲ್ಲಿ ನಡೆದ ಬಸ್ ಅಪಘಾತದಲ್ಲಿ ಮೃತಪಟ್ಟ ನಿರ್ವಹಕ ಈರಯ್ಯ ಅವರಿಗೆ ಬಸ್ ಚಾಲಕ, ನಿರ್ವಹಕ ಸಂಘ ಮಿಡಿದಿದೆ. ಕೇವಲ ಒಂದೇ ತಾಸಿನಲ್ಲಿ ಸರಿಸುಮಾರು ಒಂದು ಲಕ್ಷ ರೂಪಾಯಿ ಮೊತ್ತ ಸಂಗ್ರಹಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಖಾಸಗಿ ಬಸ್ ಸಿಬ್ಬಂದಿಗಳು ಈರಯ್ಯ ಕುಟುಂಬದ ಸಹಾಯಕ್ಕೆ ಮಿಡಿದಿದ್ದು ಮಾನವೀಯತೆ ಮೆರೆದಿದ್ದಾರೆ. ಖಾಸಗಿ ಬಸ್ ಸಿಬ್ಬಂದಿಗಳಿಂದ ಒಂದು ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹವಾಗಿದೆ. ಬಳಿಕ ಖಾಸಗಿ ಬಸ್ ನಿಲ್ದಾಣದಲ್ಲಿ ಈರಯ್ಯ ಮನೆಯವರಿಗೆ ಹಣ ಹಸ್ತಾಂತರ ಮಾಡಲಾಗಿದೆ.
ಮಂಗಳೂರು ನಗರದ ನಂತೂರಿನಲ್ಲಿ ನಡೆದ ಅಪಘಾತದಲ್ಲಿ ಬಸ್ ನಿಂದ ಎಸೆಯಲ್ಪಟ್ಟು ನಿರ್ವಾಹಕ ಈರಯ್ಯ ಮೃತಪಟ್ಟಿದ್ದರು. ಬಸ್ ನ್ ಫುಟ್ ಬೋರ್ಡ್ ನಲ್ಲಿದ್ದ ನಿರ್ವಾಹಕ ಬಸ್ ವೇಗ ಪಡೆದುಕೊಂಡ ಸಂದರ್ಭ ಏಕಾಏಕಿ ಬಸ್ ನಿಂದ ಎಸೆಯಲ್ಪಟ್ಟಿದ್ದಾರೆ. ರಸ್ತೆಗೆ ಎಸೆಯಲ್ಪಟ್ಟ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಿಲ್ಲ.