ಕುಂದಾಪುರ, ಆ 31 (DaijiworldNews/SM): ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿ ಕೆರೆಕಟ್ಟೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದೀಗ ಪೊಲೀಸ್ ಸಿಬ್ಬಂದಿಗಳು ತೇಪೆ ಕಾರ್ಯ ಕೈಗೊಂಡಿದ್ದು, ಸಾರ್ವಜನಿಕರಿಂಡ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಎಲ್ಲೆಂದರಲ್ಲಿ ಹೊಂಡ ಗುಂಡಿಗಳು ಬಿದ್ದ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ಯಾರೇ ಈ ರಸ್ತೆಯಲ್ಲಿ ಸಂಚರಿಸಿದರೂ ಹಿಡಿ ಶಾಪ ಹಾಕದೇ ಸಂಚರಿಸುವುದು ಸಾಧ್ಯವೇ ಇರಲಿಲ್ಲ.
ರಸ್ತೆ ಸಂಚಾರದ ಸಮಸ್ಯೆಯನ್ನು ಮನಗಂಡ ಅಮಾಸೆಬೈಲು ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಸ್ವತಃ ಹಾರೆ ಪಿಕ್ಕಾಸಿ ಬುಟ್ಟಿ ಹಿಡಿದ ಪೊಲೀಸರು ರಸ್ತೆಗೆ ಮಣ್ಣು ಹಾಕಿ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅಮಾಸೆಬೈಲು ಠಾಣೆಯ ಹೊಸಂಗಡಿ ಬೀಟ್ ಸಿಬ್ಬಂದಿಗಳಾದ ರಾಘವೇಂದ್ರ, ನವೀನ್, ಸುಧಾಕರ, ದೇವರಾಜ್ ಸೇರಿ ಶ್ರಮದಾನದ ಮೂಲಕ ತೇಪೆ ಕಾರ್ಯ ನಡೆಸಿದ್ದು, ಇವರ ಮಾನವೀಯತೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.