ಮಂಗಳೂರು, ಆ 31 (DaijiworldNews/HR): ಚುನಾವಣೆ ಮೊದಲು ಕಾಂಗ್ರೆಸ್ ಘೋಷಣೆ ಮಾಡಿದ ಗ್ಯಾರಂಟಿಗೆ ಮಾನದಂಡ ಇರಲಿಲ್ಲ. ಇವತ್ತು ಘೋಷಿಸಿದ ನಾಲ್ಕು ಗ್ಯಾರಂಟಿಗಳಿಗೆ ಮಾನದಂಡ ಹಾಕಿದ್ದಾರೆ. ಗೃಹ ಜ್ಯೋತಿ ಹೆಸರಲ್ಲಿ ಇಡೀ ರಾಜ್ಯವನ್ನು ಕತ್ತಲಿನಲ್ಲಿ ಇಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಗೃಹ ಜ್ಯೋತಿ ಹೆಸರಲ್ಲಿ ಇಡೀ ರಾಜ್ಯವನ್ನು ಕತ್ತಲಿನಲ್ಲಿ ಇಡಲಾಗಿದ್ದು, ಝೀರೋ ಬಿಲ್ ಜೊತೆಗೆ ಈಗ ಝೀರೋ ಕರೆಂಟ್ ಆಗಿದೆ. ಇಲ್ಲದಿರೋ ಮಾನದಂಡಗಳನ್ನು ತಂದು ಜನರಿಗೆ ಸಮಸ್ಯೆ ಆಗ್ತಿದೆ. ಇಂದಿರಾ ಗಾಂಧಿಯವರ ಗತವೈಭವದಲ್ಲಿ ಎಮರ್ಜೆನ್ಸಿ ತರಲಾಗಿತ್ತು. ಈಗ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ, ಸಾಮಾಜಿಕ ಜಾಲತಾಣದವರ ಮೇಲೂ ಕೇಸು ಹಾಕಲಾಗ್ತಿದೆ. ಭ್ರಷ್ಟಾಚಾರ ಆರೋಪ ಮಾಡಿದ ಅಧಿಕಾರಿಗಳ ಮೇಲೂ ಕೇಸು ಹಾಕಿ ಎಮರ್ಜೆನ್ಸಿ ತಂದ್ದಿದಾರೆ ಎಂದರು.
ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರೋದ್ರಿಂದ ರೈತರಿಗೆ ಸಮಸ್ಯೆ ಆಗಲಿದೆ. ಕರ್ನಾಟಕ ರೈತರ ಇಚ್ಛೆ ಪೂರೈಸದೇ, ಅವರಿಗೆ ನ್ಯಾಯ ಕೊಡದೇ ಇಲ್ಲಿನ ರೈತರಿಗೆ ನೀರು ಕೊಡದೇ ರಾತ್ರಿ ತಮಿಳುನಾಡಿಗೆ ನೀರು ಬಿಡಲಾಗ್ತಿದೆ. ಇದು ರಾಜ್ಯದ ರೈತರಿಗೆ ಮಾಡಿರೋ ದೊಡ್ಡ ಅನ್ಯಾಯ. ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ ಇದೆ, ಬರದ ಸ್ಥಿತಿ ಇದೆ. ಇದರ ಮಧ್ಯೆ ಪಂಪ್ ಗಳಿಗೆ ಕರೆಂಟ್ ಇಲ್ಲ, ಜನ ತತ್ತರಿಸಿ ಹೋಗಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ.