ಕುಂದಾಪುರ, ಆ 31 (DaijiworldNews/HR): ಮೊಗವೀರ ಭವನದಲ್ಲಿ ತಾಲೂಕು ಆಡಳಿತ, ಮಕ್ಕಳ ಅಭಿವೃದ್ದಿ ಇಲಾಖೆ ಕುಂದಾಪುರ ತಾಲೂಕು, ಕುಂದಾಪುರ ಪುರಸಭೆ ವತಿಯಿಂದ ನಡೆದ ಗೃಹಲಕ್ಷ್ಮೀ ಯೋಜನೆಯ ಉದ್ಘಾಟನೆಯನ್ನು ಕುಂದಾಪುರದ ತಹಶೀಲ್ದಾರ್ ಶೋಭಾಲಕ್ಷ್ಮೀ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯ 155 ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನದಲ್ಲಿ ಹಾಗೂ ಪ್ರತಿ ನಗರ ಸ್ಥಳೀಯ ಸಂಸ್ಥೆಯ 52 ವಾರ್ಡ್ಗಳಲ್ಲಿ ಹಾಗೂ 6 ತಾಲೂಕು ಕೇಂದ್ರಗಳಲ್ಲಿ ಮತ್ತು 1 ಜಿಲ್ಲಾ ಕೇಂದ್ರದಲ್ಲಿ ಸೇರಿದಂತೆ ಒಟ್ಟು 214 ಸ್ಥಳಗಳಲ್ಲಿ ಏಕ ಕಾಲದಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ. 2.86 ಸಾವಿರ ಫಲಾನುಭವಿಗಳಲ್ಲಿ ಈಗಾಗಲೇ 2.48 ಸಾವಿರ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ಪೂರಕವಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ ವರ್ಣೆಕರ್, ಪುರಸಭಾ ಮುಖ್ಯಾಧಿಕಾರಿ ಮಂಜುನಾಥ, ಪುರಸಭಾ ಸದಸ್ಯ ಶ್ರೀಧರ ಶೇರೆಗಾರ್ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಯೋಜನಾಧಿಕಾರಿ ಅನುರಾಧ ಹಾದಿಮನೆ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.