ಬಂಟ್ವಾಳ, ಎ10(SS): ಸಾವಿರಾರು ವರುಷಗಳ ಇತಿಹಾಸವಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಒಂದು ತಿಂಗಳ ಅವಧಿಯ ವೈಭವದ ಜಾತ್ರೆ ನಡೆಯುತ್ತಿದ್ದು, ಇಂದು ಕಡೇ ಚೆಂಡು (ಕೊನೆಯ ಚೆಂಡು) ಉತ್ಸವ ನಡೆಯಲಿದೆ.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಒಟ್ಟು 5 ದಿನಗಳ ಕಾಲ ವೈಭವದ ಚೆಂಡಿನ ಉತ್ಸವ ನಡೆಯುತ್ತದೆ. ಇಂದು ಕಡೇ ಚೆಂಡು ನಡೆಯಲಿದ್ದು, ಬಳಿಕ (ಎ11) ಮಹಾರಥೋತ್ಸವ ನಡೆಯಲಿದೆ. ಬಳಿಕ ಆರಡ ದಿನ ಫಲ್ಗುಣಿ ನದಿಯಲ್ಲಿ ಜಳಕ ನಡೆದು ಒಂದು ತಿಂಗಳ ಜಾತ್ರೆ ಕೊನೆಗೊಳ್ಳುತ್ತದೆ.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಚೆಂಡು ಉತ್ಸವಕ್ಕೆಂದು ಪ್ರತ್ಯೇಕ ಗದ್ದೆಯಿದ್ದು, ಚೆಂಡು ನಡೆಯುವ ಸಮಯದಲ್ಲಿ ಪವಿತ್ರತೆಯನ್ನು ಕಪಾಡಿಕೊಳ್ಳಲಾಗುತ್ತದೆ. ತಾಯಿ ರಾಜರಾಜೇಶ್ವರಿಯು ಚಂಡ-ಮುಂಡರ ರುಂಡವನ್ನು ಕಡಿದು ಚೆಂಡಾಡಿದ ಪ್ರತೀಕವಾಗಿ ಈ ಚೆಂಡಾಟ ಕ್ಷೇತ್ರದಲ್ಲಿ ನಡೆಯುತ್ತದೆ ಎಂಬುದು ಇತಿಹಾಸದ ಪುಟಗಳಲ್ಲಿ ಉಲ್ಲೇಖಗೊಂಡಿದೆ.
ಪೊಳಲಿ ಸಾವಿರ ಸೀಮೆಯ ದೇವಾಲಯವಾಗಿದ್ದು, ಮಳಲಿ ಮತ್ತು ಅಮ್ಮುಂಜೆ ಗ್ರಾಮಸ್ಥರ ನಡುವೆ ಚೆಂಡಾಟ ನಡೆಯುತ್ತದೆ. ಪೊಳಲಿಯ ಚೆಂಡು ಗಾತ್ರದಲ್ಲಿ ಬಹಳ ದೊಡ್ಡದಾಗಿದ್ದು, ಅದನ್ನು ಚರ್ಮದಿಂದ ತಯಾರಿಸಲಾಗುತ್ತದೆ. 2 ಊರಿನ ಗ್ರಾಮಸ್ಥರು ಚೆಂಡಾಟವಾಡುತ್ತಾ ಅದನ್ನು ಪ್ರತ್ಯೇಕ ಜಾಗಕ್ಕೆ ತಂದು ಮುಟ್ಟಿಸಬೇಕು. ಗದ್ದೆಯ ಎಡಮಗ್ಗುಲಿಗೆ ಮುಟ್ಟಿದರೆ ಅಮ್ಮುಂಜೆಗೂ, ಬಲ ಮಗ್ಗುಲಿಗೆ ಮುಟ್ಟಿದರೆ ಮಳಲಿಗೆ ವಿಜಯ ಎಂದು ಬಣ್ಣಿಸಲಾಗುತ್ತದೆ.