ಬಂಟ್ವಾಳ, ಎ10(SS): ಪ್ರಧಾನಿ ನರೇಂದ್ರ ಮೋದಿಯವರು ಭವಿಷ್ಯದ ನವ ಭಾರತ ನಿರ್ಮಾಣದ ಶಕ್ತಿಯಾಗಿದ್ದಾರೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಓರ್ವ ವ್ಯಕ್ತಿಯಲ್ಲ, ಅವರು ಭವಿಷ್ಯದ ನವ ಭಾರತ ನಿರ್ಮಾಣದ ಶಕ್ತಿಯಾಗಿದ್ದಾರೆ. ರಾಹುಲ್ ಗಾಂಧಿಯವರಿಗಿಂತ ವಯಸ್ಸಿನಲ್ಲಿ ಮೋದಿ ಹಿರಿಯರು, ಆದರೆ ನರೇಂದ್ರ ಮೋದಿಯವರು ಯುವಜನತೆಯ ಐಕಾನ್ ಆಗಿದ್ದಾರೆ ಎಂದು ಹೇಳಿದರು.
ಬಿಜೆಪಿ ದೇಶದ ಮುಂದಿನ ಭವಿಷ್ಯ ಮತ್ತು ರೈತ ಪರವಾದ ಪ್ರಣಾಳಿಕೆಯನ್ನು ಬಿಡುಗಡೆಮಾಡಿದೆ. ಆದರೆ, ಕಾಂಗ್ರೆಸ್ ಪಕ್ಷ ಈಗಾಗಲೇ ಬಿಡುಗಡೆಗೊಳಿಸಿರುವ ಪ್ರಣಾಳಿಕೆ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ರಚಿಸಿರುವ ಜಂಟಿ ಪ್ರಣಾಳಿಕೆಯಾಗಿದೆ ಎಂದು ವ್ಯಂಗ್ಯವಾಡಿದರು.
ಮಂಗಳೂರಿನ ಕೇಂದ್ರ ಮೈದಾನದಲ್ಲಿ ಎ.13 ರಂದು ಸಂಜೆ 3.30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುವ ವಿಜಯಸಂಕಲ್ಪ ರ್ಯಾಲಿಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಈ ರ್ಯಾಲಿ ಚುನಾವಣಾ ಪ್ರಚಾರದ ದಿಕ್ಕನ್ನೇ ಬದಲಿಸಲಿದೆ ಎಂದು ತಿಳಿಸಿದರು.
ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಈ ರ್ಯಾಲಿಯಲ್ಲಿ 5 ಸಾವಿರ ಮಂದಿ ಕಾರ್ಯಕರ್ತರಿಗೆ ಚೌಕಿದಾರಪೇಟೆ ಧರಸಲು ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸುವವರು ಸಂಜೆ 3.30ರ ಒಳಗಾಗಿ ಮೈದಾನದ ಒಳಗೆ ಪ್ರವೇಶಿಸಬೇಕು ಎಂದು ವಿನಂತಿಸಿದ್ದಾರೆ.