ಮಂಗಳೂರು, ಎ10(SS): ಬಿಜೆಪಿಯ ಏಳು ಶಾಸಕರು ಆಯ್ಕೆಯಾದ ಬಳಿಕ ಕೋಮು ಗಲಭೆಗೆ ಆಸ್ಪದ ನೀಡುತ್ತಿಲ್ಲ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆ ಮತ್ತು ಮಹಿಳೆಯ ಮಾನಭಂಗ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವ ಮೂಲಕ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಜಿಲ್ಲೆಯಲ್ಲಿ ಮತ್ತೆ ಕೋಮು ಗಲಭೆಗೆ ಆಸ್ಪದ ನೀಡುತ್ತಿದೆ ಎಂದು ದೂರಿದ್ದಾರೆ.
ಜಿಲ್ಲೆಯಲ್ಲಿ ಈ ಹಿಂದಿನ ಕಾಂಗ್ರೆಸ್ ಸರಕಾರವಿದ್ದಾಗ, ಏಳು ಮಂದಿ ಕಾಂಗ್ರೆಸ್ ಶಾಸಕರಿದ್ದರು. ಆಗ ಪದೇಪದೇ ಕೋಮು ಗಲಭೆ ನಡೆಯುತ್ತಿತ್ತು. ಬಿಜೆಪಿಯ ಏಳು ಶಾಸಕರು ಆಯ್ಕೆಯಾದ ಬಳಿಕ ಕೋಮು ಗಲಭೆಗೆ ಆಸ್ಪದ ನೀಡುತ್ತಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಕರಾವಳಿ ಜಿಲ್ಲೆಗೆ ಆಗಮಿಸಿ ಮತ ನೀಡುವಂತೆ ವಿನಂತಿಸುತ್ತಿದ್ದಾರೆ. ಇಲ್ಲಿನ ದೇವಸ್ಥಾನ ಇವರಿಗೆ ಬೇಕು. ತಿಳಿವಳಿಕೆ ಇಲ್ಲದವರು ಮತ ನೀಡಲು ಬೇಕೇ ಎಂಬುದನ್ನು ಕಾಂಗ್ರೆಸ್-ಜೆಡಿಎಸ್ ನಾಯಕರು ಉತ್ತರಿಸಲಿ ಎಂದು ಪ್ರಶ್ನಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲು ಅವರು ಕೇಂದ್ರ ಸರಕಾರದಿಂದ ಕಳೆದ ಐದು ವರ್ಷದಲ್ಲಿ ಜಿಲ್ಲೆಗೆ 16,520 ಕೋಟಿ ರೂ. ಅನುದಾನ ತಂದಿದ್ದಾರೆ. ಆದರೆ ರಾಜ್ಯದ ಸಿದ್ದರಾಮಯ್ಯ ಸರಕಾರ ಮತ್ತು ಈಗಿನ ಮೈತ್ರಿ ಸರಕಾರ ಜಿಲ್ಲೆಗೆ ಎಷ್ಟು ಅನುದಾನ ನೀಡಿದೆ ಎಂಬುದನ್ನು ಅವರೇ ತಿಳಿಸಲಿ ಎಂದು ಸವಾಲು ಹಾಕಿದರು.