ಪುಂಜಾಲಕಟ್ಟೆ, ಎ10(SS): ಪ್ರಧಾನಿ ನರೇಂದ್ರ ಮೋದಿ ಮೋಸದ, ಸುಳ್ಳು ಮಾತುಗಳಿಂದ ಜನತೆಯನ್ನು ಮರುಳುಗೊಳಿಸಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ದೂರಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ನಡೆದ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮೋಸದ ಮಾತುಗಳಿಂದ ಜನತೆಯನ್ನು ಮರುಳುಗೊಳಿಸಿದ್ದಾರೆ. ಜನಧನ ಮೂಲಕ ಪ್ರತಿಯೊಬ್ಬರ ಖಾತೆಗೆ ಆರ್ಥಿಕ ಸಹಾಯ ನೀಡುವ ಮಾತು ಸುಳ್ಳಾಗಿದೆ. 30 ರೂ.ಗಳಿಗೆ ಪೆಟ್ರೋಲ್, ಡೀಸೆಲ್ ನೀಡುತ್ತೇನೆಂದ ಮೋದಿ ಜನತೆಯನ್ನು ವಂಚಿಸಿದ್ದಾರೆ ಎಂದು ಕಿಡಿ ಕಾರಿದರು.
ಕಳೆದ 28 ವರ್ಷಗಳಿಂದ ಬಿಜೆಪಿ ಸದಸ್ಯರ ಸಾಧನೆ ಶೂನ್ಯವಾಗಿದೆ. ಮೋದಿ ಕಾಳಧನ ವಾಪಸು ತರುತ್ತೇವೆಂದು ಹೇಳಿದವರು ಬಂಡವಾಳಶಾಯಿಗಳಿಗೆ ಮಣೆ ಹಾಕಿದ್ದಾರೆ. ಹೀಗಾಗಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಅಭಿವೃದ್ಧಿಗೆ ಅವಕಾಶ ನೀಡಬೇಕು ಎಂದು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಧಾರ್ಮಿಕ ಭಾವನೆಗಳ ಮೂಲಕ ಜನತೆಯನ್ನು ವಿಭಜಿಸಿ ಮತ ಕೇಳುವ ಬಿಜೆಪಿಯನ್ನು ದೂರವಿರಿಸಿ ಸರ್ವ ಧರ್ಮ ಸೌಹಾರ್ದದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದರು.