ಉಡುಪಿ, ಎ10(SS): ದೇಶದ ಕೋಟ್ಯಾಂತರ ಭಾರತೀಯರ ನವ ಭಾರತದ ಕನಸು ಬಿಜೆಪಿಯಿಂದ ನನಸಾಗಲಿದೆ ಎಂದು ಸಂಸದೆ ಹಾಗೂ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಪ್ರಣಾಳಿಕೆ ಸಂಕಲ್ಪ ಪತ್ರ - 2019 ಬಿಡುಗಡೆಯಾಗಿದ್ದು, ಈ ಪ್ರಣಾಳಿಕೆಯಿಂದ ಭಾರತೀಯರ ನವ ಭಾರತದ ಕನಸು ನನಸಾಗಲಿದೆ. ರೈತರ, ಬಡವರ, ಅಸಂಘಟಿತ ವಲಯದ ಕಾರ್ಮಿಕರ ಗ್ರಾಮೀಣ ಜನತೆ, ರೈಲ್ವೆ ಅಭಿವೃದ್ಧಿ, ಭಾರತ್ ಮಾಲಾದಂತಹ ಯೋಜನೆ, ದೇಶದ ಭದ್ರತೆಗೆ ಆದ್ಯತೆ ಸೇರಿದಂತೆ ಅನೇಕ ಅಭಿವೃದ್ಧಿ ಪರ ಆಶಯಗಳನ್ನು ಈ ಸಂಕಲ್ಪ ಪತ್ರ ಒಳಗೊಂಡಿದೆ ಎಂದು ಹೇಳಿದ್ದಾರೆ.
ಬಿಜೆಪಿ ಪ್ರಣಾಳಿಕೆಯ ಸಂಕಲ್ಪ ಪತ್ರದಲ್ಲಿ ಸಂವಿಧಾನದ 370 ನೇ ವಿಧಿ, 35 ಎ ವಿಧಿ ಮೊದಲಾದ ದೇಶದ ಏಕತೆಗೆ ಕಂಟಕ ಪ್ರಾಯವಾದ ವಿಧಿಗಳನ್ನು ರದ್ದುಗೊಳಿಸುವ ಪ್ರಸ್ತಾಪವಿದೆ. ಸಣ್ಣ ವ್ಯಾಪಾರಿಗಳ ಹಿತ ಕಾಯುವಿಕೆ, ಕಿಸಾನ್ ಸಮ್ಮಾನ್ ವಿಸ್ತರಣೆ ಮುಂತಾದ ಹತ್ತು-ಹಲವು ಜನಪರ ಯೋಜೆನಗಳಿಂದ ದೇಶವಾಸಿಗಳ ಕನಸಿನ ಸಶಕ್ತ ಭಾರತ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.