ಉಡುಪಿ, ಆ 29 (DaijiworldNews/MS): "ಗೂಡ್ಸ್ ವಾಹನಗಳಿಗೆ ಒಂದೇ ಬಾರಿಗೆ ಲೈಫ್ ಟ್ಯಾಕ್ಸ್ ಅನ್ನು ಭರಿಸಬೇಕೆಂದು ಸರ್ಕಾರ ನೀಡಿರುವ ಆದೇಶದಿಂದ ಡುಪಿ ಜಿಲ್ಲೆಯ ಲಾರಿ, ಟೆಂಪೋ ಮಾಲಕರು ಮತ್ತು ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನಮ್ಮ ವ್ಯಾಪಾರ ವಹಿವಾಟು ತೀವ್ರ ಕುಂಠಿತಗೊಂಡಿರುವ ಸಂಧರ್ಭದಲ್ಲಿ ಸರಕಾರ ಇಂತಹ ಆದೇಶ ಹೊರಡಿಸಿರುವುದು ಲಾರಿ ಟೆಂಪೋ ಮಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ" ಎಂದು ಲಾರಿ ಮತ್ತು ಟೆಂಪೋ ಚಾಲಕ ಮಾಲಕರ ಸರ್ವ ಸಂಘಟನೆಗಳ ಒಕ್ಕೂಟ ಉಡುಪಿ ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸಿ ಹೇಳಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು "ಗೂಡ್ಸ್ ವಾಹನಗಳಿಗೆ 3 ತಿಂಗಳಿಗೊಮ್ಮೆ ರಸ್ತೆ ತೆರಿಗೆಯನ್ನು ಕಟ್ಟುತಿದ್ದೆವು, ಆದರೆ ಈಗ ಏಕಾಏಕಿಯಾಗಿ ರಾಜ್ಯ ಸರಕಾರವು ಒಮ್ಮೆಲೆ 15 ವರ್ಷಗಳ ಟ್ಯಾಕ್ಸ್ ಅನ್ನು ಕಟ್ಟಬೇಕು ಎಂದು ಆದೇಶ ನೀಡಿದ್ದು ಮಳೆಗಾಲದ ಸಂಧರ್ಭದಲ್ಲಿ ಲಕ್ಷಾಂತರ ರುಪಾಯಿ ಟ್ಯಾಕ್ಸ್ ಅನ್ನು ಒಮ್ಮೆಲೇ ಕಟ್ಟುವುದು ಕಷ್ಟ ಸಾಧ್ಯವಾಗಿದೆ. ಹಾಗಾಗಿ ಸರಕಾರ ಈ ಆದೇಶವನ್ನು ಹಿಂಪಡೆಯಬೇಕು. ರಾಜ್ಯ ಸರಕಾರಕ್ಕೆ ಹಣದ ತುರ್ತು ಅಗತ್ಯ ಬಂದಿರುವಂತೆ ಕಾಣುತ್ತದೆ, ಹೀಗಾಗಿ ಇದನ್ನು ಲಾರಿ ಮಾಲಕರ ಮೇಲೆ ಹಾಕಿದ್ದಾರೆ, ವಿರೋಧ ಪಕ್ಷವಾದ ಬಿಜೆಪಿ – ಜೆಡಿಎಸ್ ಕೂಡಾ ಈ ಕುರಿತು ಮಾತನಾಡುತ್ತಿಲ್ಲ" ಎಂದರು.
"ಮಾತ್ರವಲ್ಲದೇ ಇದರ ಜೊತೆಗೆ ಇದೇ ಕಷ್ಟದ ಸಂಧರ್ಭದಲ್ಲಿ ಸರ್ಕಾರ ವಾಹನ ಮಾಲಕರಿಗೆ ಯಾವುದೇ ಪೂರ್ವ ಮಾಹಿತಿ ನೀಡದೇ ಒನ್ ಸ್ಟೇಟ್ ಒನ್ ಜಿಪಿಎಸ್ ಎಂಬ ಶೀರ್ಷಿಕೆ ಅಡಿಯಲ್ಲಿ ಖನಿಜ ಹಾಗೂ ಉಪಖನಿಜ ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಎಪಿಎಸ್ ಅಳವಡಿಸಬೇಕು ಎಂದು ಆದೇಶಿಸಿದೆ. ಜಿಪಿಎಸ್ ಅಳವಡಿಕೆಯ ಅಗತ್ಯ ವಾಹನ ಮಾಲಿಕರಿಗಿಂತಲೂ ಸರಕಾರಕ್ಕೆ ಹೆಚ್ಚು ಇದ್ದು, ಹೀಗಾಗಿ ಸರಕಾರ ತನ್ನ ಸ್ವಂತ ಖರ್ಚಿನಲ್ಲಿ ಜಿಪಿಎಸ್ ಅಳವಡಿಕೆ ಮಾಡಿ ಅದರ ಸಂಪೂರ್ಣ ನಿರ್ವಹಣೆಯನ್ನು ಜಿಲ್ಲಾಡಳೀತವೇ ನಿರ್ವಹಿಸಬೇಕು" ಎಂದು ರಾಘವೇಂದ್ರ ಸಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷ ರಮೇಶ್ ಶೆಟ್ಟಿ, ಪ್ರಮುಖರಾದ ಹರೀಶ್, ಅಶ್ವಥ್ ಕುಲಾಲ್, ಮನೋಹರ್ ಕುಂದರ್ ಉಪಸ್ಥಿತರಿದ್ದರು.