ಬಂಟ್ವಾಳ, ಏ 09(SM): ಪರಿಶಿಷ್ಟ ಜಾತಿ ಕಾಲೋನಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದ ಗ್ರಾ.ಪಂ.ನ ವಿರುದ್ಧ ಆಕ್ರೋಶದಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆಯ ಬ್ಯಾನರ್ ನ್ನು ಬಂಟ್ವಾಳ ತಾಲೂಕಿನ ಬಾಯಿಲದಲ್ಲಿ ಹಾಕಲಾಗಿದೆ.
ಇಲ್ಲಿನ ವೀರಕಂಭ ಗ್ರಾಮಪಂಚಾಯತ್ ವ್ಯಾಪ್ತಿಯ ಬಾಯಿಲ ಪರಿಶಿಷ್ಟ ಜಾತಿ ಕಾಲೋನಿಯ ಸುಮಾರು ಐದು ಮನೆಗಳಿಗೆ ಕಳೆದ ಮೂರು ವರ್ಷಗಳಿಂದ ಕುಡಿಯಲು ಶುದ್ಧ ನೀರಿಲ್ಲ, ರಾತ್ರಿ ಹೊತ್ತಿನಲ್ಲಿ ಹೊರಗೆ ಹೋಗಲು ದಾರಿದೀಪದ ವ್ಯವಸ್ಥೆ ಇಲ್ಲ, ರಸ್ತೆಯೂ ಕೂಡ ಇಲ್ಲ. ಇದನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಮತದಾನ ಬಹಿಷ್ಕಾರದ ನಿರ್ಧಾರ ಮಾಡಿದ್ದೇವೆ.
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಈ ಬಗ್ಗೆ ಗ್ರಾಮ ಸಭೆ, ಗ್ರಾಮ ಪಂಚಾಯತ್ , ಪಿಡಿಒ, ಗ್ರಾ.ಪಂ.ಅದ್ಯಕ್ಷ ಹಾಗೂ ಸದಸ್ಯರುಗಳಲ್ಲಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯವರಲ್ಲಿ ಲಿಖಿತ ದೂರು ನೀಡುತ್ತಲೆ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿಗಳು ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.