ಉಡುಪಿ, ಆ 27 (DaijiworldNews/SM): ಇತ್ತೀಚೆಗೆ ರಾಜ್ಯ ಮಟ್ಟದಲ್ಲಿ ಸುದ್ದಿಯಾದ ಮಣಿಪಾಲದ ಅಕ್ರಮ ಪಬ್ ಮತ್ತು ಡ್ರಗ್ಸ್ ವಿಚಾರದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ತೆಗೆದುಕೊಂಡ ನಿರ್ದಾಕ್ಷಿಣ್ಯ ಕ್ರಮದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ನೈತಿಕ ಬೆಂಬಲ ಸೂಚಿಸಿ ಉಡುಪಿ ಕಾಂಗ್ರೆಸ್ ಪಕ್ಷದ ನಿಯೋಗ ಇಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಅವರನ್ನು ಭೇಟಿ ಮಾಡಿ ಅಭಿನಂಧಿಸಿದರು.
ಇನ್ನು ಮುಂದಿನ ದಿನಗಳಲ್ಲಿ ಕೂಡ ಸಂಬಂಧಪಟ್ಟ ವಿಷಯದಲ್ಲಿ ಹೆಚ್ಚಿನ ನಿಗಾ ಮತ್ತು ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಅವರನ್ನು ಭೇಟಿ ಮಾಡಿ ಪ್ರಸ್ತುತ ವಿಷಯದ ಬಗ್ಗೆ ಚರ್ಚೆ ನಡೆಸಿ ಅವರ ಸಂಪೂರ್ಣ ಸಹಕಾರವನ್ನು ಯಾಚಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಡ್ರಗ್ಸ್ ಮತ್ತು ಅಕ್ರಮ ಚಟುವಟಿಕೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಸಂಪೂರ್ಣ ಸಹಕಾರ ಇದೆ ಎಂಬ ಭರವಸೆಯನ್ನು ನೀಡಿದರು .ಮಣಿಪಾಲ ಪೊಲೀಸ್ ಇನ್ಸೆಕ್ಟರ್ ದೇವರಾಜ್ ಮತ್ತು ಸಬ್ ಇಸ್ಪೆಕ್ಟರ್ ರಾಘವೇಂದ್ರ ಅವರನ್ನು ಕೂಡ ಭೇಟಿಮಾಡಿ ವಿಚಾರದ ಬಗ್ಗೆ ಚರ್ಚೆ ನಡೆಸಿದರು.