ಬಂಟ್ವಾಳ, ಆ 28 (DaijiworldNews/SM): ಚತುಷ್ಪಥ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಮೆಲ್ಕಾರ್ ಹಾಗೂ ಕಲ್ಲಡ್ಕದಲ್ಲಿಪ್ರತಿನಿತ್ಯ ವಾಹನದಟ್ಟಣೆಯಾಗುತ್ತಿದೆ. ಈ ನಡುವೆ ಸೋಮವಾರ ಮೆಲ್ಕಾರ್ ನಲ್ಲಿ ತಾಸುಗಟ್ಟಲೆ ವಾಹನದಟ್ಟಣೆ ಉಂಟಾಗಿದ್ದು, ಈ ಕುರಿತು ಕ್ರಮಕೈಗೊಂಡಿರುವ ಪೊಲೀಸರು ಕಾಮಗಾರಿ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಾಣೆಮಂಗಳೂರು ಗ್ರಾಮದ ಮೇಲ್ಕಾರ್ ಎಂಬಲ್ಲಿ KA-70-4212 ಮತ್ತು KA-21 C-3047 ಲಾರಿಗಳನ್ನು ಮತ್ತು ರೋಡ್ ರೋಲರ್ ವಾಹನವನ್ನು ರಸ್ತೆಯ ಡಾಂಬರಿಕರಣ ಮಾಡುವ ನೆಪದಲ್ಲಿ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದೆ. ರಸ್ತೆಯ ಡಾಂಬರಿಕರಣದ ಸಮಯ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದೇ, ಈ ಬಗ್ಗೆ ಪೊಲೀಸರಿಗೆ ಕೂಡಾ ಯಾವುದೇ ಮಾಹಿತಿಯನ್ನು ನೀಡದೇ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದೆ. ವಾಹನ ದಟ್ಟಣೆಗೆ ಕಾರಣವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಸಂಚಾರಿ ಪೊಲೀಸರು ಸಂಬಂಧಪಟ್ಟ ರಸ್ತೆ ಕಾಂಟ್ರಕ್ಟರ್ ವಿರುದ್ದ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 119/2023 ಕಲಂ : 283 IPC ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.