ಮೂಡುಬಿದಿರೆ, ಆ 28 (DaijiworldNews/HR): ಸಮಾಜವನ್ನು ಬದಲಾಯಿಸುವ ಶಕ್ತಿ ಯುವ ಪೀಳಿಗೆಗೆ ಇದೆ. ಜೀವನದಲ್ಲಿ ಮಾನವೀಯ ಮೌಲ್ಯ ಹಾಗೂ ಸಂತೃಪ್ತಿಯನ್ನು ಮೈಗೂಡಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಹೇಳಿದ್ದಾರೆ.
'ಹ್ಯುಮಾನಿಟಿ ಟ್ರಸ್ಟ್' (ರಿ) ಬೆಳ್ಮಣ್ ಇದರ 1000ನೇ ಪ್ರಾಜೆಕ್ಟ್ ಉಚಿತ ವಸತಿ ಯೋಜನೆಯ 20 ಬಾಡಿಗೆ ರಹಿತ ಮನೆಗಳನ್ನು ಪಡುಮಾರ್ನಾಡಿನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸಮಾಜದಲ್ಲಿ ತಪ್ಪು ಮಾಡಿ ಜೈಲಿಗೆ ಹೋದವನನ್ನು ಮತ್ತು ಆತನ ಮನೆಯವರಿಗೂ ಸಾಮಾಜಿಕವಾಗಿ ಶಿಕ್ಷೆಯಾಗುತ್ತಿತ್ತು ಆದರೆ ಇಂದು ಶ್ರೀಮಂತಿಕೆ ಮತ್ತು ಶಕ್ತಿಯನ್ನು ಪೂಜಿಸುವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಹಾಗಾಗಿ ಮಾನವೀಯ ಮೌಲ್ಯಗಳನ್ನು ಮರೆತಿದ್ದೇವೆ. ಆದರೆ ಹ್ಯುಮಾನಿಟಿ ಟ್ರಸ್ಟ್ ಅರ್ಥಪೂರ್ಣವಾಗಿ ಸಮಾಜಕ್ಕೆ ಉಪಕಾರ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ವಿಜಯ ಟೈಮ್ಸ್'ನ ವ್ಯವಸ್ಥಾಪಕ ನಿರ್ದೇಶಕಿ ವಿಜಯಲಕ್ಷ್ಮೀ ಶಿಬರೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಾವು ಹೃದಯ ವೈಶಾಲ್ಯತೆಯನ್ನು ಹೊಂದಬೇಕು. ಪ್ರೀತಿಸುವ, ದಾನ ಮಾಡುವ, ಆದರಿಸುವ, ಗೌರವಿಸುವ, ಪ್ರೋತ್ಸಾಹಿಸುವ ಹಾಗೂ ಮಾನವೀಯತೆಯ ಗುಣ ನಮ್ಮಲ್ಲಿರಬೇಕು ಎಂದರು.
ದೈಜಿವರ್ಲ್ದ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ, ರೋಶನ್ ಬೆಳ್ಮಣ್ ಅವರು ಸ್ಥಾಪಿಸಿದ ಮಾನವತಾ ಟ್ರಸ್ಟ್ ವಿವಿಧತೆಯಲ್ಲಿ ಏಕತೆಗೆ ಉತ್ತಮ ಉದಾಹರಣೆಯಾಗಿದೆ. ಟ್ರಸ್ಟ್ ಜಾತಿ, ಧರ್ಮ ಪರಿಗಣಿಸದೆ ನಿರ್ಗತಿಕರಿಗೆ ಸಹಾಯ ಮಾಡುತ್ತದೆ. ಧರ್ಮ ಮತ್ತು ಸಮುದಾಯಗಳ ನಡುವಿನ ದ್ವೇಷವನ್ನು ಹೋಗಲಾಡಿಸುವ ಸಮಯ ಬಂದಿದೆ. ಧಾರ್ಮಿಕ ಮತಾಂಧ ಮನಸ್ಸುಗಳಿಗೆ ಹ್ಯುಮಾನಿಟಿ ಟ್ರಸ್ಟ್ನಂತಹ ಸಂಸ್ಥೆ ಉತ್ತಮ ಉದಾಹರಣೆಯಾಗಿದೆ ಎಂದಿದ್ದಾರೆ.
ಉಚಿತ ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಹ್ಯುಮಾನಿಟಿ ಟ್ರಸ್ಟ್ ನ ಅಧ್ಯಕ್ಷ ರೋಶನ್ ಬೆಳ್ಮಣ್ ಮಾತನಾಡಿ, ಮಾನವೀಯತೆಯೇ ಧರ್ಮ. ಅದರ ಮೇಲೆ ಏನೂ ಇಲ್ಲ. ಈ ಧ್ಯೇಯವಾಕ್ಯದ ಆಧಾರದ ಮೇಲೆ ನಮ್ಮ ಟ್ರಸ್ಟ್ ರಚನೆಯಾಗಿದೆ. ನಾವು ಜಾತಿ, ಧರ್ಮ ಮತ್ತು ಪಂಗಡಗಳನ್ನು ಮೀರಿ ಆರ್ಥಿಕವಾಗಿ ಬಡವರಿಗೆ ನಾವು ಸಹಾಯ ಮಾಡಿದ್ದೇವೆ ಎಂದರು.
ಸಂಸ್ಥೆಯ ಟ್ರಸ್ಟಿ ಪ್ರಶಾಂತ್ ಫ್ಯ್ರಾಂಕ್ ಸ್ವಾಗತಿಸಿ ಸಂಸ್ಥೆಯ ಕಿರುನೋಟವನ್ನು ನೀಡಿದರು. ಟ್ರಸ್ಟಿಗಳಾದ ನವೀನ್ ಶೆಣೈ, ರೂಪಾ ಬಲ್ಲಾಳ್ ಅತಿಥಿಗಳನ್ನು ಪರಿಚಯಿಸಿದರು. ನೆಲ್ಸನ್ ಮೋನೀಶ್ ಕಾರ್ಯಕ್ರಮ ನಿರೂಪಿಸಿದರು.
ಇನ್ನು ಪೃಥ್ವಿ ಸಾಲ್ಯಾನ್ ದಾನಿಗಳ ವಿವರ ನೀಡಿದರು. ಲೋಯ್ಡ್ ರೇಗೋ ವಂದಿಸಿದರು. ದ.ಕ ಮತ್ತು ಉಡುಪಿ ಜಿಲ್ಲೆಯ ಇಬ್ಬರು ಬಡವರಿಗೆ ಉಚಿತವಾಗಿ ಬೋರ್ ವೆಲ್ ಕೊರೆದು ನೀಡುವುದಾಗಿ ಸಪ್ನಾ ಬೊರ್ ವೆಲ್ ನವರು ಹೇಳಿರುವುದಾಗಿ ರೋಶನ್ ಬೆಳ್ಮಣ್ ಪ್ರಕಟಿಸಿದರು.