ಪುತ್ತೂರು, ಆ 27 (DaijiworldNews/HR): ವಿನಾಕಾರಣ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಆ.22ರಂದು ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಇಂದು ಮೃತಪಟ್ಟಿದ್ದಾನೆ.
ಕಟ್ಟತ್ತಾರು, ನಿಡ್ಯಾಣ ನಿವಾಸಿ ಅಬ್ದುಲ್ ನಾಸಿರ್ ಮೃತ ಯುವಕ.
ಅಬ್ದುಲ್ ನಾಸಿರ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ವೀಡಿಯೋ ಮಾಡಿ ನಾನು ಬೆಳ್ಳಾರೆ ಸಮೀಪದ ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು ಅದ್ರಾಮ ಮತ್ತು ಕುಟುಂಬದವರು ಸೇರಿ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ನನಗೆ ಹೊಡೆದಿದ್ದಾರೆ ಎಂದು ಆರೋಪಿಸಿ ನಾಸಿರ್ ವಿಡಿಯೋ ರೆಕಾರ್ಡ್ ಮಾಡಿದ್ದು, ಇದರಿಂದ ಮನನೊಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು.
ಇನ್ನು ಅದ್ರಾಮ ಹಾಗೂ ಮತ್ತೋರ್ವರ ಜೊತೆ ಕಾರಿನಲ್ಲಿರುವಾಗಲೇ ಅವರ ಎದುರಿಗೇ ಮೊಬೈಲ್ ವೀಡಿಯೋ ಮಾಡಿ ತನ್ನ ನೋವನ್ನು ಹೇಳಿಕೊಂಡಿದ್ದರು.
ಕಾರಿನಲ್ಲಿದ್ದವರನ್ನು ವೀಡಿಯೋದಲ್ಲಿ ತೋರಿಸುತ್ತಾ ನನ್ನ ಸಾವಿಗೆ ಇವರೇ ಕಾರಣ, ನಾನು ನೇಣು ಹಾಕಿಕೊಂಡು ಸಾಯುತ್ತೇನೆ ಎಂದು ಹೇಳಿ ವೀಡಿಯೋ ಕೊನೆಗೊಳಿಸಲಾಗಿದೆ. ಬಳಿಕ ನಾಸಿರ್ ಅವರು ಪುತ್ತೂರು ರೈಲ್ವೇ ಸ್ಟೇಷನ್ ಬಳಿ ವಿಷ ಸೇವಿಸಿದ್ದಾರೆ ಎನ್ನಲಾಗಿದ್ದು ಆ ಬಳಿಕ ಅವರನ್ನು ಯಾರೋ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821