ಉಡುಪಿ, ಆ 26 (DaijiworldNews/HR): ಬಿಜೆಪಿ ಒಳಗೆ ಏನಾಗುತ್ತದೆ ನಾನು ಹೆಚ್ಚು ಕಮೆಂಟ್ ಮಾಡಲ್ಲ. ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕನ ಆಯ್ಕೆ ಮಾಡಲು ಇನ್ನು ಸಾಧ್ಯ ಆಗಿಲ್ಲ. ಬಿಜೆಪಿ ರಾಜ್ಯದಲ್ಲಿ ಬಹಳ ದಯನೀಯ ಸ್ಥಿತಿಯಲ್ಲಿದೆ ಎಂದು ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರಧಾನಿ ಬಂದಾಗ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಆಗದೇ ಇರುವುದು ಮತ್ತೊಂದು ಶೋಚನೀಯ ವಿಚಾರ. ಮೊದಲು 120 ಸ್ಥಾನ ಗೆದ್ದಿದ್ದ ಬಿಜೆಪಿಗೆ ದಯಾನೀಯ ಸ್ಥಿತಿಗೆ ಬಂದು ನಿಂತಿದೆ. ಬಿಜೆಪಿಯಲ್ಲಿ ಮಿಸ್ ಹ್ಯಾಂಡಲಿಂಗ್ ಮತ್ತು ಮಿಸ್ ಮ್ಯಾನೇಜ್ಮೆಂಟ್ ಇದೆ. ನಮ್ಮಂತ ನಾಯಕರನ್ನೇ ಪಕ್ಷದಿಂದ ಹೊರಗೆ ಹಾಕಿದ್ದಾರೆ ಎಂದರು.
ಅಮಿತ್ ಶಾ ರಿಂದ ಜಗದೀಶ್ ಶೆಟ್ಟರಿಗೆ ಫೋನ್ ಕರೆ ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನನಗೆ ಈವರೆಗೆ ಯಾರೂ ಕರೆ ಮಾಡಿಲ್ಲ. ಅಮಿತ್ ಶಾ, ಮತ್ತೊಬ್ಬರು ಯಾರು ಈವರೆಗೆ ಕರೆ ಮಾಡಿಲ್ಲ. ಕರ್ನಾಟಕ ಬಿಜೆಪಿ ಲೀಡರ್ ಲೆಸ್ ಆಗಿದೆ. ರಾಜ್ಯಾಧ್ಯಕ್ಷರನ್ನು ಇನ್ನೂ ರಿಪ್ಲೇಸ್ ಮಾಡಲು ಸಾಧ್ಯವಾಗಿಲ್ಲ. ಬಿಜೆಪಿಗೆ ಒಬ್ಬ ನಾಯಕ ಎಂಬುದು ಇಲ್ಲ. ಬೇರೆ ಬೇರೆ ಕಡೆ ಕಾಂಗ್ರೆಸ್ ನಾಯಕರನ್ನು ಬಿಜೆಪಿಯವರು ಭೇಟಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಇನ್ನೂ ದಯನೀಯ ಪರಿಸ್ಥಿತಿಗೆ ಹೋಗುತ್ತದೆ ಎಂದಿದ್ದಾರೆ.
ಇನ್ನು ಬಿಜೆಪಿ ಒಳಗೆ ಸಾಕಷ್ಟು ಜನ ನೊಂದಿದ್ದಾರೆ ಸಂಕಟಪಡುತ್ತಿದ್ದಾರೆ. ಬಿಜೆಪಿಯನ್ನು ಬಿಟ್ಟು ಹೊರಗೆ ಬರಲು ಬಹಳಷ್ಟು ಜನ ತಯಾರಾಗಿದ್ದಾರೆ. ನನಗೆ ಬಿಜೆಪಿ ಹೈಕಮಾಂಡ್ ನಿಂದ ಯಾವುದೇ ಕರೆ ಬಂದಿಲ್ಲ. ಕರೆ ಬಾರದೆ ಈ ಎಲ್ಲಾ ಚರ್ಚೆಗಳು ಯಾಕೆ. ಕರೆ ಮಾಡಿದರೆ ನಾನು ಮಾಧ್ಯಮಗಳಿಗೆ ತಿಳಿಸುತ್ತೇನೆ. ಕರೆ ಬರುವ ಮೊದಲು ಯಾಕೆ ಚರ್ಚೆ ಮಾಡಬೇಕು ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್ 12 ರಿಂದ 15 ಸ್ಥಾನ ಗೆಲ್ಲುವುದು ನಿಶ್ಚಿತ. ಸದ್ಯದ ಪರಿಸ್ಥಿತಿ ನೋಡಿದ್ರೆ 15ಕ್ಕಿಂತ ಹೆಚ್ಚು ಸ್ಥಾನ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಕಾಂಗ್ರೆಸ್ ಸೇರಲು ರಾಜ್ಯದ ಎಲ್ಲಾ ತಾಲೂಕು ಜಿಲ್ಲೆಯ ಜನ ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.