ಪುತ್ತೂರು, ಆ 26 (DaijiworldNews/HR): ನಗರದ ಮಹಿಳಾ ಪೊಲೀಸ್ ಠಾಣೆಯ ಬಳಿಯಲ್ಲಿ ಗುರುವಾರ ಯುವಕನೋರ್ವ ಯುವತಿಯನ್ನು ಚೂರಿಯಿಂದ ಕತ್ತು ಸೀಳಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪದ್ಮರಾಜ್ನನ್ನು ಶುಕ್ರವಾರ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಯುವತಿಯು ಪ್ರೀತಿಯ ವಿಚಾರದಲ್ಲಿ ಯುವಕನ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾಳೆ ಎಂಬ ಕಾರಣಕ್ಕೆ ಆತ ಕೃತ್ಯ ಎಸಗಿರುವುದು ವಿಚಾರಣೆಯ ವೇಳೆ ದೃಢಪಟ್ಟಿದೆ.
ವಿಟ್ಲದ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ಗೌರಿಯನ್ನು ಪದ್ಮರಾಜ್ ಪರಿಚಯಗೊಂಡು ಅವರಿಬ್ಬರ ನಡುವೆ ಪ್ರೀತಿ ಆರಂಭವಾಗಿತ್ತು. ಕೆಲವು ವರ್ಷಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಆತನ ವಿರುದ್ಧವೇ ಆಕೆ ವಿಟ್ಲ ಠಾಣೆಗೆ ದೂರು ನೀಡಿದ್ದಳು.
ಇನ್ನು ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಯಿಸಿ ಮುಂದಕ್ಕೆ ಪರಸ್ಪರ ಮಾತುಕತೆ ಇಲ್ಲ ಎಂಬುದಾಗಿ ಮುಚ್ಚಳಿಕೆ ಬರೆಯಿಸಿ ಕಳುಹಿಸಲಾಗಿತ್ತು. ಆದರೆ ಆ ಬಳಿಕವೂ ಇಬ್ಬರ ನಡುವೆ ಮಾತುಕತೆ ಮುಂದುವರಿದಿತ್ತು ಎನ್ನುವ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಆ. 24ರಂದು ಪದ್ಮರಾಜ್ ಗೌರಿ ಕೈಯಿಂದ ಕಸಿದುಕೊಂಡು ಹೋಗಿದ್ದ ಮೊಬೈಲ್ ಆತ ಈ ಹಿಂದೆ ಗಿಫ್ಟ್ ರೂಪದಲ್ಲಿ ನೀಡಿರುವುದು ಎನ್ನಲಾಗಿದೆ. ಈ ಮಧ್ಯೆ ಬೇರೊಬ್ಬ ಯುವಕನ ವಿಚಾರದಲ್ಲಿ ಗೌರಿ ಜತೆ ಮನಸ್ತಾಪ ಹೊಂದಿದ್ದ ಪದ್ಮರಾಜ್ ಅದೇ ಕಾರಣಕ್ಕೆ ಆತ, ಗೌರಿ ಕೆಲಸ ಮಾಡುತ್ತಿದ್ದ ಪುತ್ತೂರಿನ ಫ್ಯಾನ್ಸಿ ಅಂಗಡಿ ಸನಿಹ ಬಂದು ಆಕೆಯನ್ನು ಕರೆದು ಮೊಬೈಲ್ ಕಿತ್ತುಕೊಂಡಿದ್ದ ಎನ್ನಲಾಗಿದೆ.
ಇನ್ನು ಆರೋಪಿಯು ತಾನು ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯ ಓರ್ವರ ಬೈಕ್ನಲ್ಲಿ ಬಂದಿದ್ದು, ಆ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತೆಗೆ ಫ್ಯಾನ್ಸಿ ಅಂಗಡಿ ಬಳಿ ಆತ ಜಗಳ ಮಾಡಿರುವ ಕುರಿತಂತೆ ಸಿಸಿ ಕೆಮರಾ ದೃಶ್ಯಾವಳಿಯನ್ನು ಪಡೆದುಕೊಂಡಿದ್ದಾರೆ. ಆರೋಪಿ ಕೃತ್ಯಕ್ಕೆ ಬಳಸಿದ ಚಾಕು ಅನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.