ಕಾಸರಗೋಡು, ಆ 25 (DaijiworldNews/SM): ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡ ಪ್ರದೇಶದ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆಗೆ ನ್ಯಾಯಾಲಯದಿಂದ ಪರಿಹಾರವಾಗಿದೆ. ಅಡೂರು ಶಾಲೆಯ ಕನ್ನಡ ವಿದ್ಯಾರ್ಥಿಗಳಿಗೆ ಪಾಠ ಮಾಡಲು ನೇಮಕಗೊಂಡಿದ್ದ ಕನ್ನಡ ಕನ್ನಡ ಅರಿಯದ ಶಿಕ್ಷಕಿಯನ್ನು ಅಲ್ಲಿಂದ ವರ್ಗಾಯಿಸಿ ಕನ್ನಡ ತಿಳಿದಿರುವ ಶಿಕ್ಷಕಿಯನ್ನು ನೇಮಕ ಮಾಡಬೇಕೆಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಓಣಂ ಹಬ್ಬದ ರಜೆ ಕಳೆದ ಕೂಡಲೇ ಕನ್ನಡ ಶಿಕ್ಷಕಿಯನ್ನು ಶಾಲೆಯಲ್ಲಿ ನೇಮಕ ಮಾಡಬೇಕೆಂದು ಆದೇಶಿಸಿದ ನ್ಯಾಯಾ ಲಯ ಅಲ್ಲಿ ಈಗಾಗಲೇ ನೇಮಕಗೊಂ ಡಿರುವ ಮಲಯಾಳಿ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಬೇಕೆಂದು ಆದೇಶ ನೀಡಿದೆ. ಕನ್ನಡ ಶಾಲೆಯಲ್ಲಿ ಮಲೆಯಾಳಿ ಅಧ್ಯಾಪಕರನ್ನು ನೇಮಕ ಮಾಡುವ ಕೇರಳ ಲೋಕಸೇವಾ ಆಯೋಗದ ಹುನ್ನಾರಕ್ಕೆ ಚಾಟಿ ಬೀಸಿದಂತಾಗಿದೆ.
ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಳೆದ ಜೂನ್ ೩ರಂದು ಕನ್ನಡ ತಿಳಿಯದ ಅಧ್ಯಾಪಿಕೆಯನ್ನು ಕನ್ನಡ ವಿದ್ಯಾರ್ಥಿಗಳಿಗೆ ಕಲಿಸಲು ನೇಮಕ ಮಾಡಲಾಗಿತ್ತು. ಇದನ್ನು ಪ್ರತಿಭಟಿಸಿದಾಗ,ಅಲ್ಲಿನ ಮುಖ್ಯೋಪಾಧ್ಯಾಯರನ್ನೇ ವರ್ಗಾಯಿಸಿ ತ್ತು .ಆದರೆ ಶಾಲೆಯ ವಿದ್ಯಾರ್ಥಿಗಳ ಪೋಷಕರು , ಸ್ಥಳೀಯರು, ಕನ್ನಡಾಭಿಮಾನಿಗಳು ಸೇರಿ ಹೋರಾಟ ಸಮಿತಿ ರೂಪೀಕರಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಾ ವಾದವನ್ನು ಆಲಿಸಿದ ನ್ಯಾಯಾಲಯ ಕನ್ನಡ ವಿದ್ಯಾರ್ಥಿಗಳಿಗೆ ಭಾಷೆ ತಿಳಿಯದ ಅಧ್ಯಾಪಿಕೆಯಿಂದ ಪಾಠ ಮಾಡಲು ಸಾಧ್ಯವಿಲ್ಲವೆಂದು ಮನಗಂಡು ಅವರನ್ನು ಅಲ್ಲಿಂದ ಬೇರೆಡೆಗೆ ವರ್ಗಾಯಿಸಿ ಕನ್ನಡ ತಿಳಿದಿರುವ ಅಧ್ಯಾಪಿಕೆಯನ್ನು ನೇಮಕ ಮಾಡಲು ಆದೇಶಿಸಿದೆ. ಗಡಿನಾಡಿನಲ್ಲಿ ಕನ್ನಡದ ಉಸಿರನ್ನು ಉಳಿಸಿಕೊಳ್ಳುವಲ್ಲಿ ಹೋರಾಟಗಾರರು ಸಫಲರಾಗಿರುವುದು ಕನ್ನಡಾಭಿಮಾನಿ ಗಳಿಗೆ ಸಂತಸ ತಂದಿದೆ.
ಗಡಿನಾಡು ಕಾಸರಗೋಡು ಜಿಲ್ಲೆಯ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ವಿಭಾಗಕ್ಕೆ ಮಲಯಾಳಿ ಶಿಕ್ಷಕಿ ನೇಮಕ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದ ಕನ್ನಡ ವಿದ್ಯಾರ್ಥಿಗಳ ಹೋರಾಟಕ್ಕೆ ಇದೀಗ ಜಯ ಲಭಿಸಿದೆ. ಮಲಯಾಳಿ ಶಿಕ್ಷಕಿಗೆ ಕನ್ನಡದಲ್ಲಿ ವ್ಯವಹರಿಸಲು ತಿಳಿಯದು ಎಂಬುದನ್ನು ಅರ್ಥೈಸಿಕೊಂಡಿರುವ ನ್ಯಾಯಾಲಯ ತಕ್ಷಣವೇ ಆ ಮಲಯಾಳಿ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾಯಿಸಿ ತಕ್ಷಣವೇ ಅವರ ಸ್ಥಾನಕ್ಕೆ ಕನ್ನಡ ತಿಳಿದಿರುವ ಶಿಕ್ಷಕರನ್ನು ನೇಮಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.
ಈ ತೀರ್ಪು ಕಳೆದ ಅನೇಕ ವರ್ಷಗಳಿಂದ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಕೇರಳ ಸರಕಾರ, ಶಿಕ್ಷಣ ಇಲಾಖೆ ಮತ್ತು ಕೇರಳ ಲೋಕಸೇವಾ ಆಯೋಗಕ್ಕೆ ಬಿದ್ದ ದೊಡ್ಡ ಹೊಡೆತವಾಗಿದೆ.