ಮಲ್ಪೆ,ಏ09(AZM):ಮಲ್ಪೆಯಿಂದ ತೆರಳಿದ್ದ ಮೀನುಗಾರಿಕಾ ಬೋಟು ಮಹಾರಾಷ್ಡ್ರದ ದೇವಗಡದಲ್ಲಿ ಅವಘಡಕ್ಕೆ ಒಳಗಾಗಿದ್ದು, ಮೀನುಗಾರರನ್ನು ಸುರಕ್ಷಿತವಾಗಿ ದಡ ಸೇರಿಸಲಾಗಿದೆ. ಆದರೆ ಈ ಅವಘಡದಿಂದ ಸುಮಾರು 90 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
ಮಲ್ಪೆ ಬಂದರಿನಿಂದ ಮೀನುಗಾರಿಕ್ಕೆಗೆಂದು ತೆರಳಿದ್ದ ಬೋಟು,ಮಹಾರಾಷ್ಡ್ರದ ದೇವಗಡಕ್ಕೆ ತಲುಪಿದಾಗ ಅವಘಡಕ್ಕೆ ಒಳಗಾಗಿದೆ. ಬೋಟಿನ ಅಡಿಭಾಗಕ್ಕೆ ಹಾನಿ ಉಂಟಾಗಿ ನೀರು ಒಳನುಗಿದ್ದು, ಬೋಟು ಮುಳುಗಡೆಯಾಗುವ ಮುಂಚೆಯೇ ಮೀನುಗಾರರನ್ನು ರಕ್ಷಿಸಿ ದಡ ಸೇರಿಸಲಾಗಿದೆ. ಬಟ್ಕಳ ಮೂಲದ 7 ಮಂದಿ ಮೀನುಗಾರರು ಮೀನುಗಾರಿಕೆಗೆಂದು ತೆರಳಿದ್ದರು. ಸುನಿಲ್ ಮಂಜುನಾಥ, ಸುರೇಶ್ ಮಂಜುನಾಥ್, ಜಗನ್ನಾಥ ರಾಮ, ಪ್ರಶಾಂತ, ಗಜೇಂದ್ರ ಪಾಂಡುರಂಗ, ಕೃಷ್ಣ ಮೊಗೇರ, ಲೋಹಿತ್ ಧರ್ಮ ಅವಘಡದಿಂದ ಪಾರಾಗಿ ದಡ ಸೇರಿದ ಮೀನುಗಾರರಾಗಿದ್ದಾರೆ.
ದಿನೇಶ್ ತಿಂಗಳಾಯ ಅವರಿಗೆ ಸೇರಿದ 'ಶಿವರಕ್ಷಾ' ಹೆಸರಿನ ಮೀನುಗಾರಿಕಾ ಬೋಟು ಇದಾಗಿದ್ದು, ಅವಘಡದಲ್ಲಿ 8 ಸಾವಿರ ರೂ. ಡೀಸೆಲ್,ಮೀನಿನ ಬಲೆ,ಜಿಪಿಎಸ್,ಹಿಡಿದ ಮೀನುಗಳು ಸೇರಿದಂತೆ ಸುಮಾರು 90 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.ಸದ್ಯ 7 ಮೀನುಗಾರರು ಸುರಕ್ಷಿತರಾಗಿ ದಡ ಸೇರಿದ್ದಾರೆ.