ಉಳ್ಳಾಲ, ಆ 24 (DaijiworldNews/SM): ಆಧಾರ್ ಕಾರ್ಡ್ ಇಲ್ಲದೆ ಸರಕಾರಿ ನರ್ಮ್ ಬಸ್ಸಲ್ಲಿ ಪ್ರಯಾಣಿಸಿದ ಐವರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರನ್ನು ಅರ್ಧ ದಾರಿಯಲ್ಲೇ ಇಳಿಸಿದ ಸರಕಾರಿ ಬಸ್ ತಡೆದ ಸ್ಥಳೀಯರು ನಿರ್ವಾಹಕನನ್ನು ತರಾಟೆಗೆ ತೆಗೆದ ಘಟನೆ ಕುಂಪಲದಲ್ಲಿ ಇಂದು ನಡೆದಿದೆ.
ಮಂಗಳೂರಿನಿಂದ ಕುಂಪಲ ನಡುವೆ ಓಡಾಟ ನಡೆಸುವ ಸರಕಾರಿ ನರ್ಮ್ ಬಸ್ಸಿನ ನಿರ್ವಾಹಕ ಹುಸೇನ್ ಸಾಬ್ ಐ ಹಳ್ಳೂರ ಎಂಬವರು ಎರಡನೇ ಮತ್ತು ಮೂರನೇ ತರಗತಿ ಓದುವ ಐದು ಮಂದಿ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಇಲ್ಲದಕ್ಕೆ ನಿಮಗೆ ಉಚಿತ ಪ್ರಯಾಣವಿಲ್ಲವೆಂದು ಹಣ ಕೇಳಿದ್ದಾರೆ. ಹಣ ನೀಡದಕ್ಕೆ ಬಸ್ಸಿನಿಂದ ಅರ್ಧ ದಾರಿಯಲ್ಲೇ ಕೆಳಗೆ ಇಳಿಸಿ ಅಮಾನವೀಯತೆ ಮರೆದಿದ್ದಾರೆ. ಕುಂಪಲ ಸರಕಾರಿ ಶಾಲೆಯ ಎರಡನೇ ಮತ್ತು ಮೂರನೇ ತರಗತಿಯ ಐವರು ವಿದ್ಯಾರ್ಥಿನಿಯರು ಇಂದು ಶಾಲೆ ಮಗಿಸಿ ಸರಕಾರಿ ಬಸ್ಸು ಹತ್ತಿದ್ದಾರೆ. ಬಸ್ಸಿನ ಖಾಯಂ ನಿರ್ವಾಹಕ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಕೇಳುತ್ತಿರಲಿಲ್ಲವಂತೆ ಹಾಗಾಗಿ ವಿದ್ಯಾರ್ಥಿನಿಯರು ಆಧಾರ್ ತಂದಿರಲಿಲ್ಲ. ಇಂದು ಖಾಯಂ ನಿರ್ವಾಹಕ ರಜೆ ಮಾಡಿದ್ದು ಹುಸೇನ್ ಸಾಬ್ ಬದಲಿ ಕರ್ತವ್ಯದಲ್ಲಿದ್ದರು. ಘಟನೆಯನ್ನು ಬಸ್ಸಿನಲ್ಲಿ ಕುಳುತಿದ್ದ ಕುಂಪಲ ಸರಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ ಗುಲಾಬಿ ಅವರು ಗಮನಿಸಿದ್ದಾರೆ.
ಸಂಜೆ ಸ್ಥಳೀಯರು ಕುಂಪಲ ಶಾಲೆಯ ಎದುರು ಬಸ್ ತಡೆದು ನಿಲ್ಲಿಸಿ ನಿರ್ವಾಹಕರನ್ನು ತರಾಟೆಗೆತ್ತಿದ್ದಾರೆ.