ಬಂಟ್ವಾಳ, ಆ 24 (DaijiworldNews/SM): ಕಲ್ಲಡ್ಕದಲ್ಲಿ ಹದಗೆಟ್ಟ ರಸ್ತೆ ಮತ್ತು ಧೂಳಿನಿಂದ ಸಮಸ್ಯೆಗಳು ಉಂಟಾಗಿದ್ದು, ಇದರಿಂದ ರೋಸಿಹೋದ ಕಲ್ಲಡ್ಕದ ವರ್ತಕರು ಹಾಗೂ ಸಾರ್ವಜನಿಕರು ಗುರುವಾರ ಪಕ್ಷ, ಜಾತಿ, ಧರ್ಮ ಬೇಧ ಮರೆತು ಒಗ್ಗಟ್ಟಾಗಿ ಗುತ್ತಿಗೆ ಕಂಪನಿ ವಾಹನಗಳನ್ನು ತಡೆಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಗುತ್ತಿಗೆ ಕಂಪನಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ಬುಧವಾರದೊಳಗೆ ಕೆಲಸ ಆರಂಭಿಸುವುದಾಗಿ ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ಅಂತ್ಯಗೊಂಡಿತು.
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು ಕಲ್ಲಡ್ಕದಲ್ಲಿ ರಸ್ತೆ ಛಿದ್ರಗೊಂಡಿದ್ದು, ಹೊಂಡ ಮುಚ್ಚಿ, ರಸ್ತೆಯನ್ನು ಸದೃಢವಾಗಿಸುವ ಕೆಲಸ ಆರಂಭಿಸಬೇಕು, ಧೂಳಿನ ಸಮಸ್ಯೆ ತಲೆದೋರಿದ್ದು, ಇದಕ್ಕೆ ಮುಕ್ತಿ ನೀಡಬೇಕು, ಡ್ರೈನೇಜ್ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು. ಬುಧವಾರದೊಳಗೆ ಕಾಮಗಾರಿ ಆರಂಭಗೊಳ್ಳದೇ ಇದ್ದರೆ, ಕಲ್ಲಡ್ಕ ಪೇಟೆ ಬಂದ್, ಹೆದ್ದಾರಿ ತಡೆಯಂಥ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಆಗಸ್ಟ್ 16ಕ್ಕೆ ಬಂಟ್ವಾಳಕ್ಕೆ ಬಂದಿದ್ದ ಸಂದರ್ಭ ಕಲ್ಲಡ್ಕದ ವರ್ತಕರ, ಸಾರ್ವಜನಿಕರ ನಿಯೋಗ ಭೇಟಿ ಮಾಡಿ, ಕಲ್ಲಡ್ಕದಲ್ಲಿ ಹೆದ್ದಾರಿ ಕಾಮಗಾರಿ ಸಂದರ್ಭ ಉಂಟಾಗುವ ತೊಂದರೆ ಕುರಿತು ಗಮನ ಸೆಳೆದಿದ್ದರು. ಮುಖ್ಯವಾಗಿ ಹದಗೆಟ್ಟ ರಸ್ತೆ ಹಾಗೂ ಧೂಳಿನಿಂದ ಉಂಟಾಗುವ ಸಮಸ್ಯೆ ಕುರಿತು ಬೆಳಕು ಚೆಲ್ಲಿದ್ದರು. ಈ ಸಂದರ್ಭ ಮಳೆ ಕಡಿಮೆಯಾದಾಗ ಗಟ್ಟಿಯಾದ ಡಾಂಬರು ಹಾಕಿಸುವುದು ಹಾಗೂ ಧೂಳಿಗೆ ತಕ್ಷಣವೇ ಕಲ್ಲಡ್ಕದಲ್ಲಿ ಪ್ರತಿನಿತ್ಯ ನೀರು ಸಿಂಪಡಿಸುವ ಕುರಿತು ಸಂಸದ ನಳಿನ್ ಸೂಚನೆ ನೀಡಿದ್ದರು. ಆದರೆ ಸಂಸದರು ಸೂಚನೆ ನೀಡಿದಾಗ ಒಪ್ಪಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಯಾವುದನ್ನೂ ಅನುಷ್ಠಾನ ಮಾಡದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯಿತು.
ಗುರುವಾರ ಮಧ್ಯಾಹ್ನ ಪ್ರತಿಭಟನೆ ನಡೆದ ಸಂದರ್ಭ ಸ್ಥಳಕ್ಕೆ ಬಂಟ್ವಾಳ ನಗರ ಠಾಣೆ ಎಸ್.ಐ. ರಾಮಕೃಷ್ಣ ಮತ್ತು ಸಿಬಂದಿ, ಗುತ್ತಿಗೆ ಕಂಪನಿಯ ಅಧಿಕಾರಿಗಳು ಆಗಮಿಸಿ ಮಾತುಕತೆ ನಡೆಸಿದರು. ಈ ಸಂದರ್ಭ ಸಮಸ್ಯೆ ಕುರಿತು ಪ್ರತಿಭಟನಾಕಾರರು ಅಧಿಕಾರಿಗಳಿಗೆ ಮನದಟ್ಟು ಮಾಡಿದರು.