ಉದ್ಯಾವರ, ಆ 24 (DaijiworldNews/MS): ಉದ್ಯಾವರ ಬೊಳ್ಜೆ ನಿವಾಸಿ ಅನಿತಾ ಡಿ. ಸಿಲ್ವಾ ಅವರ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಕಾಪು ಪೊಲೀಸರು ಬಂಧಿಸಿದ್ದು ಚಿನ್ನಾಭರಣ, ನಗದು, ಸ್ಕೂಟಿ ಸಹಿತ 8,02,083 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಟಪಾಡಿ ಏಣಗುಡ್ಡೆ ಗ್ರಾಮದ ಅಚ್ಚಡ ನಿವಾಸಿ ಜೋನ್ ಪ್ರಜ್ವಲ್ ಫೆರ್ನಾಂಡಿಸ್ (32)ಬಂಧಿತ ಆರೋಪಿ. ಬಂಧಿತನಿಂದ 6,90,713 ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು, ಮೋಟಾರು ಸೈಕಲ್ ಸಹಿತ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ : ಆ. 17ರಂದು ಉದ್ಯಾವರ ಬೊಳ್ಜೆಯ ಅನಿತಾ ಡಿ. ಸಿಲ್ವಾ ಅವರು ಬೆಳಗ್ಗೆ ಕೆಲಸಕ್ಕೆ ಹೋಗಿದ್ದು ಅವರ ಮಗ ಶಾಲೆಗೆ ತೆರಳಿದ್ದನು. ಮಗಳು ಮಧ್ಯಾಹ್ನ 1 ಗಂಟೆಗೆ ಮನೆಗೆ ಬಾಗಿಲು ಹಾಕಿ ಉಡುಪಿಗೆ ಕಂಪ್ಯೂಟರ್ ಕ್ಲಾಸ್ಗೆಂದು ಹೋಗಿದ್ದು ಸಂಜೆ 5ಗಂಟೆಗೆ ಮನೆಗೆ ಮರಳಿದ ವೇಳೆ ಮನೆಗೆ ಕಳ್ಳರು ನುಗ್ಗಿದ್ದ ಘಟನೆ ಬೆಳಕಿಗೆ ಬಂದಿತ್ತು. ಮನೆಯ ಬೆಡ್ ರೂಮ್ನ ಕಪಾಟಿನ ಲಾಕರ್ನ್ನು ಮುರಿದ ಕಳ್ಳರು ಚಿನ್ನಾಭರಣ ಇಟ್ಟಿದ್ದ ಪೆಟ್ಟಿಗೆಯನ್ನು ಕದ್ದೊಯ್ದಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಂಬಂಧಿಕನ ಮೇಲೆ ಸಂಶಯ : ಆರೋಪಿ ಜೋನ್ ಪ್ರಜ್ವಲ್ ಫೆರ್ನಾಂಡಿಸ್ ಅನಿತಾ ಡಿ. ಸಿಲ್ವ ಅವರ ಸಂಬಂಧಿಕನಾಗಿದ್ದು ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಕಳ್ಳತನ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿ ಜೋನ್ ಮೇಲೆ ಹೆಚ್ಚಿನ ಸಂಶಯ ವ್ಯಕ್ತವಾಗಿತ್ತು. ಆತನನ್ನೇ ಕೇಂದ್ರೀಕರಿಸಿ ತನಿಖೆ ಮುಂದುವರಿಸಿದ ಕಾಪು ಕ್ರೈಂ ಎಸ್ಸೈ ಪುರುಷೋತ್ತಮ್ ಮತ್ತು ಸಿಬ್ಬಂದಿಗಳಾದ ಪ್ರವೀಣ್, ರಾಜೇಶ್ ಮತ್ತು ನಾರಾಯಣ್ ಅವರು ಅಚ್ಚಡ ಕ್ರಾಸ್ ಬಳಿ ಸ್ಕೂಟಿಯನ್ನು ಅಡ್ಡ ಹಾಕಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದು ಈ ವೇಳೆ ಆತನಲ್ಲಿ ಹಣ, ಮತ್ತು ಬಂದಾರ ಅಡವಿಟ್ಟ ಚೀಟಿಗಳು ದೊರಕಿದ್ದವು.
ಮದ್ಯ, ಇಸ್ಪೀಟ್, ಜೂಜಾಟದ ವ್ಯಸನ : ಬಳಿಕ ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ನೇತೃತ್ವದಲ್ಲಿ ವಿಚಾರಣೆಗೊಳಪಡಿಸಿದಾಗ ಅನಿತಾ ಅವರ ಮನೆಯಲ್ಲಿ ತಾನೇ ಕಳ್ಳತನ ನಡೆಸಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದನು. ಆತ ನೀಡಿದ ಮಾಹಿತಿಯ ಮೇರೆಗೆ ವಿವಿಧ ಸಹಕಾರಿ ಸಂಘಗಳು, ಫೈನಾನ್ಸ್ಗಳು, ಚಿನ್ನಾಭರಣ ಅಂಗಡಿಗಳಿಗೆ ತೆರಳಿದ ಪೊಲೀಸರು ಚಿನ್ನಾಭರಣಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ಮದ್ಯ ವ್ಯಸನ, ಸಾಲ ಮತ್ತು ಜೂಜಾಟದ ಸುಳಿಗೆ ಸಿಲುಕಿದ್ದ ಆರೋಪಿ ಚಿನ್ನಾಭರಣಗಳನ್ನು ಮಾರಾಟ ಮಾಡಿದ ಮತ್ತು ಒತ್ತೆಯಿಟ್ಟ ಹಣವನ್ನು ಇಸ್ಪೀಟ್, ಜೂಜಾಟ ಮತ್ತು ಮದ್ಯ ವ್ಯಸನಕ್ಕೆ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಕೊಂಡ ಸೊತ್ತುಗಳ ವಿವರ : 33.720 ಗ್ರಾಂ. ತೂಕದ ಚಿನ್ನದ ಕರಿಮಣಿ ಸರ, 30.040 ಗ್ರಾಂ. ತೂಕದ 3 ಚಿನ್ನದ ಬಳೆಗಳು, 24.240 ಗ್ರಾಂ. ತೂಕದ 9 ಚಿನ್ನದ ಉಂಗುರಗಳು, 28.590 ಗ್ರಾಂ. ತೂಕದ 5ಚಿನ್ನದ ಸರ, 4.760 ಗ್ರಾಂ. ತೂಕದ 2 ಬ್ರಾಸ್ ಲೈಟ್, 7.880 ಗ್ರಾಂ. ತೂಕದ ೩ ಕಿವಿಯೋಲೆ, 0.920 ಗ್ರಾಂ. ತೂಕದ 1 ಚಿನ್ನದ ಕ್ರಾಸ್, ನಗದು 36,370 ರೂ., ಮೊಬೈಲ್ ಪೋನ್ ಮತ್ತು ಕಪ್ಪು ಬಣ್ಣದ ಡಿಯೋ ಸ್ಕೂಟರ್ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಡುಪಿ ಎಸ್ಪಿ ಅಕ್ಷಯ್ ಎಂ. ಹಾಕೆ, ಹೆಚ್ಚುವರಿ ಎಸ್ಪಿ ಎಸ್. ಟಿ. ಸಿದ್ದಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾಪು ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ, ನೇತೃತ್ವದಲ್ಲಿ ಕಾಪು ಕ್ರೈಂ ಎಸ್ಸೈ ಪುರುಷೋತ್ತಮ್ ಸಹಕಾರದೊಂದಿಗೆ ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್ ಕಾಪು ವೃತ್ತ, ರಾಜೇಶ್ ಪಡುಬಿದ್ರಿ ಠಾಣೆ, ನಾರಾಯಣ ಕಾಪು ಠಾಣೆ, ಶ್ರೀಧರ್, ಸುಧಾಕರ್ ಮತ್ತು ಚಾಲಕ ಪ್ರಸಾದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.