ಉಡುಪಿ, ಆ 24 (DaijiworldNews/MS): ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ತ್ವರಿತವಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾಗಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 66 ಮತ್ತು 169, 169ಎ ಗೆ ಸಂಬಂಧಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ 66 ಹಾಗೂ ರಾ. ಹೆದ್ದಾರಿ 169 ಎ ರ ರಸ್ತೆ ಕಾಮಗಾರಿಗಳು ಪ್ರಗತಿಯಲಿದ್ದು, ಮುಂಗಾರು ಮಳೆಯ ಹಿನ್ನೆಲೆ, ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಮಳೆ ಕಡಿಮೆ ಇರುವ ಹಿನ್ನೆಲೆ, ಕಾಮಗಾರಿಗಳನ್ನು ಪುನರಾರಂಭಿಸಿ, ತ್ವರಿತ ಗತಿಯಲ್ಲಿ ಕೈಗೊಳ್ಳುವುದರೊಂದಿಗೆ ಗುಣಮಟ್ಟದಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾ. ಹೆ. 66 ಸಂತೆಕಟ್ಟೆ ಜಂಕ್ಷನ್ನಲ್ಲಿನ ಅಂಡರ್ಪಾಸ್ ಕಾಮಗಾರಿಯನ್ನು ಕೈಗೊಳ್ಳುವಾಗ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಮಣ್ಣು ಕುಸಿಯದ ಹಾಗೆ ರೀಟೈನಿಂಗ್ ವಾಲ್ಗಳನ್ನು ಹೆಚ್ಚು ಕಾರ್ಮಿಕರುಗಳನ್ನು ನಿಯೋಜಿಸುವುದರೊಂದಿಗೆ 24*7 ಕಾಲಾವಧಿಯ ಶಿಫ್ಟ್ನಲ್ಲಿ ನಿರ್ಮಿಸಬೇಕೆಂದು ಸೂಚನೆ ನೀಡಿದರು.
ಕರಾವಳಿ ಜಂಕ್ಷನ್ನಿಂದ ಮಲ್ಪೆ ಬಂದರು ವರೆಗಿನ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ಕಾಮಗಾರಿಯನ್ನು ಪ್ರಾರಂಭಿಸಬೇಕು, ಈ ರಸ್ತೆಯಲ್ಲಿ ಹೆಚ್ಚು ಪ್ರವಾಸಿಗರು ಹಾಗೂ ಮೀನುಗಾರಿಕಾ ಚಟುವಟಿಕೆ ವಾಹನಗಳು ಸಂಚರಿಸುತ್ತಿರುವ ಹಿನ್ನೆಲೆ, ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಬದಲಿ ರಸ್ತೆ ಮಾರ್ಗದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಬೇಕು ಎಂದರು.
ರಾ.ಹೆ 169 ನ ಇಂದ್ರಾಳಿ ರೈಲ್ವೆ ಸೇತುವೆಯ ಕಾಮಗಾರಿಯನ್ನು ನವೆಂಬರ್ನ ಒಳಗಾಗಿ ಪೂರ್ಣಗೊಳಿಸಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುವುದರೊಂದಿಗೆ ಕೈಗೊಳ್ಳಬೇಕು, ಈಗಾಗಲೇ ಸೇತುವೆಯ ಮೇಲೆ ಸಂಚರಿಸುತ್ತಿರುವ ವಾಹನಗಳ ಸಂಚಾರಕ್ಕೆ ಅಗತ್ಯವಿರುವ ಕಾಮಗಾರಿಗಳನ್ನು ಪೊಲೀಸ್ ಅಧೀಕ್ಷಕರ ಸೂಚನೆ ಯನ್ವಯ ಕೈಗೊಳ್ಳಬೇಕೆಂದು ತಿಳಿಸಿದರು.
ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಯಾವುದೇ ಕೊರತೆಗಳು ಆಗದಂತೆ ನೋಡಿಕೊಳ್ಳಬೇಕು ಎಂದ ಅವರು, ಗ್ರಾಮೀಣ ಭಾಗದಲ್ಲಿ ರೈಲ್ವೆ ಹಳಿಗಳ ದಾಟುವ ರಸ್ತೆಗಳ ನಿರ್ಮಾಣಕ್ಕೆ ಅನುಮತಿ ಪತ್ರವನ್ನು ನೀಡಬೇಕೆಂದು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕೇಳೀ ಬರುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಜನಸಾಮಾನ್ಯರಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ರಾ.ಹೆ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಕೈಗೊಂಡಾಗ ಮಾತ್ರ ಅಪಘಾತಗಳು ಆಗುವುದನ್ನು ತಪ್ಪಿಸಲು ಸಾಧ್ಯ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ ಹಾಕೆ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಎಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮದ್ ಅಜ್ಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.