ಕಾಸರಗೋಡು, ಆ 22 (DaijiworldNews/SM): ರೈಲುಗಳ ಮೇಲೆ ನಿರಂತರ ಕಲ್ಲೆಸೆತದ ಘಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡು ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಇಂದು ಬೆಳಿಗ್ಗೆಯಿಂದ ಪೊಲೀಸರು ನಡೆಸಿದ ತಪಾಸಣೆಯಿಂದ 50 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ರೈಲು ಹಳಿ ಪರಿಸರದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಹಿನ್ನಲೆಯಲ್ಲಿ ಇವರನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ 10 ವರ್ಷಗಳ ಕಠಿಣ ಶಿಕ್ಷೆ ನೀಡುವ ಮೊಕದ್ದಮೆಯನ್ನು ಇವರ ಮೇಲೆ ಹೂಡಲಾಗುವುದು. ರೈಲ್ವೇ ಹಳಿ ಕೇಂದ್ರೀಕರಿಸಿ ಪೊಲೀಸ್ ನಿಗಾ ಹಾಗೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ರೈಲ್ವೇ ಹಳಿ ಪರಿಸರದ ಮನೆಗಳನ್ನು ಕೇಂದ್ರೀಕರಿಸಿ ಪೊಲೀಸರು ನಿಗಾ ವಹಿಸಿದ್ದಾರೆ.
ರೈಲುಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಕಾಸರಗೋಡು - ಕಣ್ಣೂರು ನಡುವೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಹತ್ತಕ್ಕೂ ಅಧಿಕ ಕಲ್ಲೆಸೆತದ ಘಟನೆಗಳು ಹಾಗೂ ಹಳಿಯಲ್ಲಿ ಕಲ್ಲು ಸೇರಿದಂತೆ ಹಲವು ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.