ಮಂಗಳೂರು, ಆ 22 (DaijiworldNews/MS): ಕರಾವಳಿಯಲ್ಲಿ ಬಿಜೆಪಿಯ ಚುನಾಯಿತ ಜನಪ್ರತಿನಿಧಿಗಳ ರಾಜಕೀಯ ಹಸ್ತಕ್ಷೇಪಕ್ಕೆ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಭಯಪಡುವ ಅಗತ್ಯವಿಲ್ಲ. ಅಧಿಕಾರಿಗಳು ಬೆದರಿಕೆಗೆ ಬಗ್ಗದೆ ಕಾನೂನಿನ ಪ್ರಕಾರ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ್ ರೈ ಹೇಳಿದ್ದಾರೆ.
ಅವರು ಆಗಸ್ಟ್ 22 ರಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, "ಅಧಿಕಾರವಿಲ್ಲದ ಬಿಜೆಪಿ ಪ್ರತಿನಿಧಿಗಳು ನೀರಿಲ್ಲದೆ ಮೀನುಗಳಾಗಿದ್ದಾರೆ" ಎಂದು ಟೀಕಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಅಕ್ರಮ ಸಕ್ರಮ ಸಮಿತಿಯಡಿ 71 ಪ್ರಕರಣಗಳು ಕಾನೂನು ಬಾಹಿರವಾಗಿ ನಡೆಸಿರುವ ಬಗ್ಗೆ ದೂರು ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಬಿಜೆಪಿಯ ಪ್ರತಿನಿಧಿಗಳು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿ ಸರ್ವಾಧಿಕಾರ ಮತ್ತು ದ್ವೇಷದ ರಾಜಕಾರಣ ಮಾಡುತ್ತಿದೆ. ಅಧಿಕಾರಿಗಳು ಆತಂಕ ಪಡುವ ಅಗತ್ಯವಿಲ್ಲ, ಕಾನೂನು ಪ್ರಕಾರ ಕೆಲಸ ಮಾಡಲಿ. ಮೇಲಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿಲ್ಲ. ಕಾಂಗ್ರೆಸ್ ಆಡಳಿತಕ್ಕೆ ಸಂಪೂರ್ಣ ಜನಾದೇಶದೊಂದಿಗೆ ಬಂದಿದೆ. ಇದು ಅವರ ಸರ್ಕಾರವಲ್ಲ ಎಂದು ರೈ ಹೇಳಿದ್ದಾರೆ.
ಉಜ್ವಲ ಯೋಜನೆಯನ್ನು ಕ್ಷೇತ್ರದ ಮತದಾರನೂ ಅಲ್ಲದ, ಶಾಸಕನೂ ಅಲ್ಲದವರಿಂದ ಹಂಚಿಕೆ ಮಾಡಲಾಗಿದೆ. ಇಂತಹ ದಬ್ಬಾಳಿಕೆಗಳು ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳ ಮೂಲಕ ನಡೆಸಲಾಗುತ್ತಿತ್ತು. ಅದನ್ನೀಗ ಮಾಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ, ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಲ್ಯಾನ್ಸಿ ಲಾಟ್ಪಿಂಟೋ, ಶುಭೋದಯ ಆಳ್ವ, ಜಯಶೀಲ ಅಡ್ಯಂತಾಯ, ಶಾಹುಲ್ ಹಮೀದ್, ಪ್ರಥ್ವಿರಾಜ್, ಜೋಕಿಂ ಡಿಸೋಜಾ, ವಿಶ್ವಾಸ್ ದಾಸ್, ಚಂದ್ರ ಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಸಲೀಂ, ಪ್ರಕಾಶ್ ಸಾಲಿಯಾನ್, ಅಪ್ಪಿ, ಸುಹಾನ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.