ಕಾರ್ಕಳ, ಆ 22 (DaijiworldNews/MS): ಮೂಡಬಿದ್ರಿ -ಕಾರ್ಕಳ ನಡುವೆ ಹಾದುಹೋದ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸಾಣೂರು ಪರಿಸರದಲ್ಲಿ ತೆರೆದು ಕೊಂಡ ಬೃಹತ್ ಹೊಂಡದ ಕುರಿತು ರಾಷ್ಟ್ರೀಯ ಹೆದ್ದಾರಿ ವಿಭಾಗ ನಿರ್ಲಕ್ಷ್ಯ ವಹಿಸಿತ್ತು.
ಹೆದ್ದಾರಿ ವಿಭಾಗದ ಕ್ರಮನ್ನು ಪ್ರತಿಭಟಿಸಿ ಸಾಣೂರು ಗ್ರಾಮ ಪಂಚಾಯತ್ತಿನ ನೂತನ ಅಧ್ಯಕ್ಷ ಯುವರಾಜ ಜೈನ್ ಅವರು ಮೊಣಕಾಲಿನವರೆಗೆ ಮಳೆ ನೀರು ತುಂಬಿದ ಹೊಂಡಕ್ಕಿಳಿದು ಪ್ರತಿಭಟನೆ ನಡೆದಿ ಪ್ರಾತ್ಯಕ್ಷಿಕೆ ನಡೆಸಿದ್ದರು.
ಘಟನಾವಳಿಯ ಕುರಿತು ದಾಯ್ಜಿವಲ್ಡ್೯ ಸಮಗ್ರ ರೀತಿಯಲ್ಲಿ ವರದಿ ಪ್ರಸಾರ ಪಡಿಸಿ ರಾಷ್ಟ್ರೀಯ ಹೆದ್ದಾರಿ ವಿಭಾಗ ಹಾಗೂ ಜಿಲ್ಲಾಡಳಿತವನ್ನು ಎಚ್ಚರಿಸುವ ಸತ್ಕಾರ್ಯ ನಡೆಸಿತು.
ವರದಿ ಪ್ರಸಾರ ಮಾಡಿ 24 ಗಂಟೆ ಕಳೆಯುವ ಮುನ್ನಾವೇ ಹೆದ್ದಾರಿ ಇಲಾಖೆ ಸಮಸ್ಸೆಗೆ ಸ್ಪಂದಿಸಿದೆ. ಮಂಗಳವಾರ ಬೆಳಿಗ್ಗೆ 9.30ರ ವೇಳೆಗೆ ಅದೇ ಪರಿಸರದಲ್ಲಿ ತುರ್ತು ಕಾಮಗಾರಿ ಆರಂಭಿಸಿದೆ.
ಜೆಸಿಬಿ ಮೂಲಕ ಬೃಹತ್ ಗಾತ್ರದ ಹೊಂಡದ ತಳಭಾಗದಲ್ಲಿ ಹುದುಗಿಕೊಂಡಿದ್ದ ಕೆಸರನ್ನು ಹೊರ ತೆಗೆಯುವ ಕಾರ್ಯ ನಡೆಸಲಾಗಿದೆ. ಟಿಪ್ಪರ್ ಮೂಲಕ ಎರಡು ಲೋಡ್ ಮಣ್ಣು ಸುರಿದು ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಲ್ಲಿ ಇದ್ದ ಬೃಹತ್ ಗಾತ್ರದ ಹೊಂಡಕ್ಕೆ ಮುಕ್ತಿ ನೀಡಲಾಗಿದೆ.
ಜಲ್ಲಿಕಲ್ಲು ತುಂಬಿಸಿ ರಸ್ತೆಯ ದೃಢತೆಯನ್ನು ಹೆಚ್ಚಿಸುವ ಕಾರ್ಯ ನಡೆಸಲಾಗುವುದೆಂದು ಕಾಮಗಾರಿ ವಹಿಸಿಕೊಂಡಿರುವ ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್ ಕಾನ್ ಕಂಪನಿ ಮೇಲ್ವಿಚಾರಕ ಬಾಲಾಜಿ ಅವರು ತಿಳಿಸಿದ್ದಾರೆ.