ಮಂಗಳೂರು, ಎ09(SS): ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಈ ಕ್ಷೇತ್ರದ ಮತದಾರರ ಸೇವೆ ಮಾಡಲು ಪ್ರಯತ್ನಿಸಿದ್ದೇನೆ. ಈ ಬಾರಿಯೂ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದರು.
ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಯಾವುದೇ ಕಳಂಕ ಇಲ್ಲದೆ ಆಡಳಿತ ನಡೆಸಿದೆ. ಅದೇ ರೀತಿಯಲ್ಲಿ ನಾನು ಸಂಸದನಾಗಿ ಕಳೆದ 10 ವರ್ಷಗಳಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಈ ಕ್ಷೇತ್ರದ ಮತದಾರರ ಸೇವೆ ಮಾಡಲು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾರೆ.
ಅನ್ಯ ಪಕ್ಷದ ರಾಜಕೀಯ ವಿರೋಧಿಗಳು ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರಿಗೆ ಬೇರೆ ಯಾವುದೇ ವಿಷಯ ಸಿಗುತ್ತಿಲ್ಲ. ಹಾಗಾಗಿ ಸುಳ್ಳು ಹೇಳುವುದೇ ಅವರಿಗೆ ಉಳಿದಿರುವ ದಾರಿ ಎಂದು ಹೇಳಿದರು.
ಜನಪರ ಹೋರಾಟ ನಡೆಸಿರುವ ಕಾರಣಕ್ಕೆ ನನ್ನ ಮೇಲೆ ಕೇಸುಗಳನ್ನು ಹಾಕಲಾಗಿದೆಯೇ ವಿನಾ ಪಬ್, ಬಾರ್ನಲ್ಲಿ ಗಲಾಟೆ ಮಾಡಿರುವುದಕ್ಕೆ ಅಥವಾ ಗುಂಡು ಹಾರಿಸಿರುವುದಕ್ಕೆ ಅಲ್ಲ. ಹಾಗಾಗಿ ಯಾರು ಹೇಗೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡುವ ಅಗತ್ಯವಿಲ್ಲ. ನಾನು ಇಂದಿನವರೆಗೆ ಯಾವುದೇ ಗೂಂಡಾ ರಾಜಕೀಯ ಮಾಡಿಲ್ಲ. ಈ ಕೇಸುಗಳು ಜಾಸ್ತಿಯಾಗಿರುವುದು ಕೂಡ ಜನಪರ ಹೋರಾಟಕ್ಕೆ ಸಿಕ್ಕ ಕೊಡುಗೆಗಳು. ಜನರಪರ ನಿಂತಾಗ ಇದೆಲ್ಲ ಸಹಜ ಎಂದು ತಿಳಿಸಿದರು.