ಕುಂದಾಪುರ, ಆ 21(DaijiworldNews/MS): ಬೀಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೇಶ್ವರ ಮುಖ್ಯ ರಸ್ತೆಯಲ್ಲಿ ಟೈಲರ್ ಮತ್ತು ಫ್ಯಾನ್ಸಿ ಸ್ಟೋರ್ ನಲ್ಲಿ ವ್ಯಾಪಾರ ಮಾಡುತ್ತಿರುವ ಮಹಿಳೆಯೊಬ್ಬರು ರಸ್ತೆ ಬದಿ ಸಾಮಗ್ರಿಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದಾಗಿ ಬಂದ ದೂರಿನ ಮೇರೆಗೆ ವಿಚಾರಣೆಗೆ ಆಗಮಿಸಿದ ಪೊಲೀಸರ ಮೇಲೆ ಸೀಮೆಎಣ್ಣೆ ಸುರಿಯಲು ಬಂದ ಘಟನೆ ಭಾನುವಾರ ನಡೆದಿದೆ.
ಕೋಟೇಶ್ವರ ಮುಖ್ಯ ರಸ್ತೆಯಲ್ಲಿ ಸರೋಜಾ ದಾಸ್ ಎಂಬುವರು ಫ್ಯಾನ್ಸಿ ಅಂಗಡಿಯನ್ನು ಬಾಡಿಗೆಗೆ ಪಡೆದು ವ್ಯಾಪಾರ ನಡೆಸುತ್ತಿದ್ದರು. ಅಂಗಡಿಯ ಬಾಗಿಲು ಮತ್ತು ವ್ಯಾಪಾರದ ವಸ್ತುಗಳನ್ನು ರಸ್ತೆಯ ತನಕ ಇಡುತ್ತಿದ್ದರು ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸ್ಥಳೀಯರು ದೂರು ನೀಡಿದ್ದರು. ದೂರಿನ ಮೇರೆಗೆ ವಿಚಾರಣೆಗೆ ಆಗಮಿಸಿದ ಪೊಲೀಸರನ್ನು ಗದರಿಸಿದ ಮಹಿಳೆ ಬಾಟಲಿಯಿಂದ ಸೀಮೆಎಣ್ಣೆಯನ್ನು ಪೋಲಿಸರ ಮೇಲೆ ಸುರಿಯಲು ಯತ್ನಿಸಿದ್ದು, ಪೊಲೀಸರು ತಪ್ಪಿಸಿಕೊಂಡಾಗ ಸೀಮೆಎಣ್ಣೆ ನೆಲದ ಮೇಲೆ ಬಿದ್ದಿದ್ದು ಬಳಿಕ ಮಹಿಳೆ ಬೆಂಕಿಯನ್ನು ಇಟ್ಟಿದ್ದಾರೆ ಬೆಂಕಿಯನ್ನು ನಂದಿಸಲು ಮುಂದಾದ ಪೊಲೀಸ್ ಸಿಬ್ಬಂದಿಯನ್ನು ಎಳೆದು ದೂಡಿ ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಕುರಿತು ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಮಹಿಳೆಯ ವಿರುದ್ಧ ಅಮಾಸೆಬೈಲು ಹಾಗೂ ಶಂಕರನಾರಾಯಣ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ಯಾವುದೇ ಕೋರ್ಟುಗಳಿಗೂ ಹಾಜರಾಗದೆ ಇದ್ದ ಕಾರಣ ವಾರೆಂಟ್ ಆಗಿದೆ ಎಂದು ಪೊಲೀಸರ ತನಿಖೆ ಮೇಲೆ ತಿಳಿದು ಬಂದಿದೆ.