ಕಾರ್ಕಳ, ಆ 21(DaijiworldNews/MS): ರಾಷ್ಟ್ರೀಯ ಹೆದ್ದಾರಿ 169ರ ಸಣೂರು ಪರಿಸರದ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣಗೊಂಡಿದೆ.ಕೆಸರು ಮಿಶ್ರಿತ ನೀರು ಅದರಲ್ಲಿ ಶೇಖರಣೆಗೊಂಡು ಅಪಾಯ ವಲಯವಾಗಿ ಪರಿಣಮಿಸಿದ್ದರೂ, ರಾಷ್ಟ್ರೀಯ ಹೆದ್ದಾರಿಯವರು ತುರ್ತು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ.ಇದರಿಂದ ಆಕ್ರೋಶಗೊಂಡ ಸಾಣೂರು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷ ಯುವರಾಜ ಜೈನ್ ಅವರು ಹೆದ್ದಾರಿಯಲ್ಲಿ ಮಣಗಂಟಿನ ತನಕ ತುಂಬಿದ ಹೊಂಡದ ಪ್ರಾತ್ಯಕ್ಷಿಕೆ ನಡೆಸಿದ್ದಾರೆ.
ಕುಂಟುತ್ತಾ ಸಾಗುತ್ತಿರುವ ಕಾಮಗಾರಿ
ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಮಂಗಳೂರಿನ ಬಿಕರ್ನ ಕಟ್ಟೆಯ ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯನ್ನು ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್ ಕಾನ್ ಕಂಪನಿ ವಹಿಸಿದೆ.ಕಳೆದ ಎಂಟು ತಿಂಗಳಿನಿಂದ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿರುವುದರಿಂದ ಸಾರ್ವಜನಿಕರು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ರಸ್ತೆ ಡೈ ವರ್ಷನ್ ನಲ್ಲಿ ಹೊಂಡ!
ಸಾಣೂರು ಪೇಟೆಯ ಹಳೆ ಅಂಚೆ ಕಚೇರಿ ಎದುರುಗಡೆ, ಪದ್ಮನಾಭನಗರ- ಮುದ್ದಣ್ಣ ನಗರದ ಕಡೆಗೆ ಹೋಗುವಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿದೆ. ಹೊಂಡದಲ್ಲಿ ತುಂಬಿದ ಮಳೆ ನೀರು ಇದೀಗ ಕೆಸರು ಮಿಶ್ರಿತವಾಗಿದೆ.ಹೊಂಡದ ಗಾತ್ರವು ಮೇಲ್ನೋಟಕ್ಕೆ ಬಾರದೇ ಹೋದುದರಿಂದ ಕೆಲ ವಾಹನ ಚಾಲಕರು ತಮ್ಮ ವಾಹವನ್ನು ಹೊಂಡದಲ್ಲಿ ಇಳಿಸಿ ಎಡವಟ್ಟು ಮಾಡಿಕೊಂಡ ಘಟನೆಗಳು ನಡೆದಿವೆ. ಇನ್ನೂ ದ್ವಿಚಕ್ರ ವಾಹನ ಸವಾರರು ಇಲ್ಲಿ ಪಡಬಾರದಾದ ಕಷ್ಟವನ್ನು ಎದುರಿಸುತ್ತಿದ್ದಾರೆ. ಕೆಲವರು ಇದೇ ಮಾರ್ಗವಾಗಿ ಹೋಗುವಾಗ ದ್ವಿಚಕ್ರ ವಾಹನಗಳು ಪಲ್ಟಿ ಹೊಡೆದ ಘಟನೆಗಳು ಸಂಭವಿಸುತ್ತಿದೆ.
ಸ್ಥಳೀಯಾಡಳಿತಕ್ಕೂ ಕ್ಯಾರೇ ಮಾಡಲ್ಲ
ಈ ಬಗ್ಗೆ ಹಲವಾರು ಬಾರಿ ಪಂಚಾಯತ್ ಆಡಳಿತದವರು, ಪರಿಸರದ ನಾಗರಿಕರು ಗುತ್ತಿಗೆದಾರ ಕಂಪನಿಯ ಅಧಿಕಾರಿಗಳಲ್ಲಿ ಹೆದ್ದಾರಿಯಲ್ಲಿರುವ ಹೊಂಡ ಮುಚ್ಚುವ ಕಾರ್ಯ ನಡೆಸುವಂತೆ ಕೇಳಿಕೊಂಡರೂ ಕಾಮಗಾರಿ ವಹಿಸಿಕೊಂಡ ಸಂಸ್ಥೆ ಯವರು ಕ್ಯಾರೇ ಮಾಡುವುದಿಲ್ಲ.
ಗುಡ್ಡೆ ಜರಿದ ಮಣ್ಣು ರಸ್ತೆ ಮೇಲೆ
ಇದೇ ಪರಿಸರದಲ್ಲಿ ಗುಡ್ಡೆಯನ್ನು ಕಡಿದು ರಸ್ತೆ ವಿಸ್ತಾರ ಕಾರ್ಯ ನಡೆಸಲಾಗಿತ್ತು. ತೆರವುಗೊಳಿಸಲಾಗಿದ್ದ ಗುಡ್ಡೆಯ ಪಕ್ಕದಲ್ಲಿ ಪಶು ಸಂಗೋಪಾನ ಇಲಾಖೆಗೆ ಸೇರಿದ ಪಶು ಆಸ್ಪತ್ರೆಯ ಸ್ಥಿತಿಯೂ ಅಪಾಯದಂಚಿನಲ್ಲಿತ್ತು.ಕುಸಿದು ಬೀಳುವ ಪರಿಸ್ಥಿತಿಯಲ್ಲಿ ಇದ್ದ ಸಾಣೂರು ಪಶು ಆಸ್ಪತ್ರೆಯ ಕುರಿತು ವರದಿ ಪ್ರಕಟಗೊಂಡ ಬಳಿಕ ಎಚ್ಚೆತ್ತುಗೊಂಡ ಜಿಲ್ಲಾಡಳಿವು ಹೆದ್ದಾರಿ ಇಲಾಖೆಗೆ ಬಿಸಿ ಮುಟ್ಟಿಸಿದೆ.
ಅಂದಿನ ಜಿಲ್ಲಾಧಿಕಾರಿ ಕುರ್ಮಾ ರಾವ್ ರವರು ಕೂಡಲೇ ಗುತ್ತಿಗೆದಾರ ಕಂಪನಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಪಶು ಸಂಗೋಪನ ಇಲಾಖೆಗೆ ಸೂಕ್ತ ಎಚ್ಚರಿಕೆ ಹಾಗೂ ಆದೇಶವನ್ನು ನೀಡಿ ಪಶು ಚಿಕಿತ್ಸಾಲಯ ಕಟ್ಟಡವನ್ನು ನೆಲಸಮ ಮಾಡುವಂತೆ ನಿರ್ದೇಶಿಸಿದರು.ಅಪಾಯಕಾರಿ ಸ್ಥಿತಿಯಲ್ಲಿದ್ದ ಪಶು ಆಸ್ಪತ್ರೆ ನೆಲಸಮಗೊಳಿಸಲಾಗಿದ್ದು ಅದೇ ಭಾಗದ ಗುಡ್ಡೆ ಜರಿದು ಅದರ ಮಣ್ಷು ಹೆದ್ದಾರಿಯ ಮೇಲೆ ಬಿದ್ದುಕೊಂಡಿದೆ. ಇನ್ನೂ ತೆರವು ಕಾರ್ಯ ನಡೆಸಿಲ್ಲ.
ಗ್ರಾಮಸ್ಥರ ಬೆಂಬಲದಿಂದ ತಕ್ಕ ಉತ್ತರ:
"ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯು ಕೂಡಲೇ ಕ್ರಮ ಕೈಗೊಳ್ಳದಿದ್ದರೆ... ಸ್ಥಳೀಯ ನಾಗರಿಕರ ಬೆಂಬಲದೊಂದಿಗೆ ಸಾಣೂರು ಗ್ರಾಮ ಪಂಚಾಯತ್ ತಕ್ಕ ಉತ್ತರ ನೀಡಲಿದೆ": ಯುವರಾಜ್ ಜೈನ್, ಅಧ್ಯಕ್ಷರು ಸಾಣೂರು ಗ್ರಾಮ ಪಂಚಾಯತ್