ಮಂಗಳೂರು,ಏ 09(MSP): ವಿಜಯ ಬ್ಯಾಂಕ್ ನ್ನು ಯುಪಿಎ ಸರಕಾರವೇ ವಿಲೀನಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದು, ಅದನ್ನು ವಿರೋಧಿಸದ ಕಾಂಗ್ರೆಸ್ ನಾಯಕರು ಇಂದು ಮತಗಳಿಕೆಗಾಗಿ ಹೇಳಿಕೆಗಳನ್ನು ನೀಡುವುದು ನಿಜಕ್ಕೂ ಖಂಡನೀಯ. ಅದನ್ನು ನಿಲ್ಲಿಸದಿದ್ದರೆ ವಿಜಯ ಬ್ಯಾಂಕ್ ಅಭಿಮಾನಿಗಳು ಹೋರಾಟ ನಡೆಸಬೇಕಾಗುತ್ತದೆ ಎಂದು ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಬಾಳಪ್ಪ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಏ.9 ರ ಮಂಗಳವಾರ ನಗರದ ಖಾಸಗಿ ಹೋಟೇಲ್ ನಲ್ಲಿ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ ಕರೆದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು.
ವಿಜಯ ಬ್ಯಾ೦ಕ್ ವಿಲೀನ ಸಂಬಂಧಿಸಿ ಕೆಲವು ನಾಯಕರು ಸತ್ಯಕ್ಕೆ ದೂರವಾದ ಹೇಳಿಕೆ ನೀಡುವ ಮೂಲಕ ಜನತೆಯನ್ನು ಹಾದಿ ತಪ್ಪಿಸಲು ಯತ್ನಿ ಸುತ್ತಿದ್ದಾರೆ. ವಾಸ್ತವವಾಗಿ ಇವರಿಗೆ ವಿಜಯಾ ಬ್ಯಾಂಕ್ ಬಗ್ಗೆ ಯಾವುದೇ ಅಭಿಮಾನವಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ಆರಂಭಿಸಿತ್ತು ಅದರಲ್ಲಿ ವಿಜಯ ಬ್ಯಾಂಕ್ ವಿಲೀನ ಪ್ರಕ್ತಿಯೆಯೂ ಸೇರಿತ್ತು. ಕರಾವಳಿಯ ಪ್ರಭಾವಿ ನಾಯಕರೆನಿಸಿದ ಕಾಂಗ್ರೆಸ್ ನ ಅಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ ಆಗ ಕೇ೦ದ್ರದಲ್ಲಿ ಸಚಿವರಾಗಿದ್ದರು. ಈ ನಾಯಕರು ವಿಲೀನ ಪ್ರಕ್ರಿಯೆ ಬಗ್ಗೆ ಅಂದು ಒಂದೇ ಒಂದು ಮಾತು ಆಡಿಲ್ಲ. ಯಾವುದೇ ವಿರೋಧ ವ್ಯಕ್ತ ಪಡಿಸಿರಲಿಲ್ಲ. ಅ೦ದು ಅವರು ಅದನ್ನು ತಡೆಯಬಹುದಿತ್ತು .ಈ ವಿಲೀನ ಪ್ರಕ್ರಿಯೆ ನಡೆದ ಬಳಿಕ ಬಿಜೆಪಿ ಸ೦ಸದರನ್ನು ದೂರುತ್ತಿರುವ ಉದ್ದೇಶ ಏನೆ೦ದು ಅವರು ಪ್ರಶ್ನಿಸಿದ್ದಾರೆ.
ವಿಜಯ ಬ್ಯಾಂಕ್ ಕರಾವಳಿಯ ಹೆಮ್ಮೆಯ ಪ್ರತೀಕವಾಗಿತ್ತು. ಇ೦ತಹ ವಿಜಯ ಬ್ಯಾಂಕ್ ನ್ನು ಇಂದಿರಾ ಗಾಂಧಿ ನೇತ್ರತ್ವದ ಕಾ೦ಗ್ರೆಸ್ ಸರ್ಕಾರ ರಾಷ್ಟ್ರೀಕರಣ ಮಾಡುವ ಮೂಲಕ ಅದರ ಅಸ್ತಿತ್ವವನ್ನೇ ಕಿತ್ತು ಹಾಕಿತ್ತು. ವಿಜಯ ಬ್ಯಾಂಕ್ ರಾಷ್ಟ್ರೀಕರಣವಾದ ದಿನವೇ ಕರಾವಳಿಯಿಂದ ದೂರವಾಗಿದೆ. ಈಗ ಸ್ವ೦ತದ ಲಾಭಕ್ಕಾಗಿ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ವಿಜಯ ಬ್ಯಾಂಕ್ ಅಭಿವೃದ್ದಿ ರೂವಾರಿ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಹೆಸರನ್ನು ಲೈಟ್ ಹೌಸ್ ರಸ್ತೆ ಗೆ ಇಡಲು ಸರ್ವಾನುಮತದ ನಿರ್ಣಯದ ಮೂಲಕ ಪಾಲಿಕೆ ಮುಂದಾಗಿತ್ತು. ಇದಕ್ಕೆ ರಾಜ್ಯ ಸರ್ಕಾರವೂ ಅಧಿಕೃತ ಅನುಮತಿ ನೀಡಿದಾಗ ಆಗಿನ ಕಾಂಗ್ರೆಸ್ ಶಾಸಕ ಜೆ.ಆರ್ ಲೋಬೋ ಹಾಗೂ ಐವನ್ ಡಿ ಸೋಜಾ ಸರ್ಕಾರ ಮೇಲೆ ಒತ್ತಡ ಹೇರಿ ತಡೆಯಾಜ್ಞೆ ತಂದರು. ಹೀಗಾಗಿ ಇಂದು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಬಗ್ಗೆ ವಿಜಯ ಬ್ಯಾಂಕ್ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಅರ್ಹತೆ ಇಲ್ಲ.ಇನ್ನು ಸಂಸದನಾದರೆ ವಿಜಯ್ ಬ್ಯಾಂಕ್ ಮತ್ತೆ ಸ್ಥಾಪನೆ ಮಾಡುತ್ತೇನೆ ಎನ್ನುವ ಮೂಲಕ ಮಿಥುನ್ ರೈ ನೀಡುತ್ತಿರುವ ಬಾಲಿಶ ಹೇಳಿಕೆ ಹಾಸ್ಯಾಸ್ಪದ. ಮೊದಲು ಕಾನೂನು ಸರ್ಕಾರ ಅಂದರೆ ಏನು ಎನ್ನುವುದನ್ನು ತಿಳಿದುಕೊಳ್ಳಲಿ ಎಂದು ಎಚ್ಚರಿಕೆ ನೀಡಿದರು.