ಮಂಗಳೂರು, ಆ 21(DaijiworldNews/MS): ತುಳುನಾಡಿನಲ್ಲಿ ನಾಗನ ಆರಾಧನೆಗೆ ವಿಶಿಷ್ಟ ಸ್ಥಾನಮಾನವಿದೆ. ಅದೇ ರೀತಿ ವರ್ಷದ ಪರ್ವ ನಾಗರಪಂಚಮಿಯಂದು ನಾಗನಿಗೆ ಇಷ್ಟವಾಗುವ ಕೇದಗೆ ಮತ್ತು ಸಂಪಿಗೆಯನ್ನು ಆರಾಧನೆಗೆ ಬರುವ ಪ್ರತಿಯೊಬ್ಬರೂ ತರುವ ವಾಡಿಕೆಯಿದೆ. ಇದನ್ನೇ ಉಪಯೋಗಿಸಿಕೊಂಡ ಕೆಲ ಮಾರಾಟಗಾರರು ಕೇದಗೆಯ ಬದಲಿಗೆ ಅದೇ ರೀತಿ ಕಾಣುವ ಕೊಳಚೆ ನೀರು ಹರಿಯುವ ಜಾಗದಲ್ಲಿ ಬೆಳೆಯುವ ಮುಂಡೇವು ಎಲೆಯನ್ನು ಕಟ್ಟವನ್ನಾಗಿಸಿ ರೂ. 300ಕ್ಕೆ ಮಾರಿ ಯಾಮಾರಿಸಿದ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇದಗೆ ಮತ್ತು ಸಂಪಿಗೆಯ ಸುವಾಸನೆ ನಾಗನಿಗೆ ಪ್ರಿಯವಾದುದು. ನಾಗರಪಂಚಮಿಯಂದು ಎಲ್ಲಿದ್ದರೂ ಅದನ್ನು ಹುಡುಕಿ ತಂದು ನಾಗನಿಗೆ ಅನೇಕರು ಅರ್ಪಿಸುತ್ತಾರೆ. ಇದನ್ನೇ ದುರುಪಯೋಗಪಡಿಸಿಕೊಂಡ ಕೆಲಮಂದಿ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ಖರೀದಿಸಿದ್ದೆನ್ನಲಾದ ಕೇದಗೆಯನ್ನು ನಾಗಸಾನಿಧ್ಯಕ್ಕೆ ಅಲಂಕಾರಕ್ಕೆ ತಂದಿದ್ದಾರೆ. ಆದರೆ ಎಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ನಾಗಾರಾಧಕರೊಬ್ಬರು ಅದು ಮುಂಡೇವು ಗಿಡದ ಎಲೆ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಅಲ್ಲದೆ ಕೇದಗೆ ಖರೀದಿಸುವವರು ಎಲ್ಲಿಯೂ ಯಾಮಾರದೆ , ಸರಿಯಾಗಿ ಗಮನಿಸಿ ಖರೀದಿಸುವಂತೆ ಜಾಗೃತೆ ಮಾತುಗಳನ್ನಾಡಿದ್ದಾರೆ. ಅಲ್ಲದೆ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ಇದೇ ಮುಂಡೇವು ಎಲೆಗಳನ್ನು ಮೂಟೆಗಟ್ಟಲೆ ಇಟ್ಟು ಮಾರಾಟ ಮಾಡಲಾಗುತ್ತಿದೆ ಅನ್ನುವ ಆರೋಪವನ್ನು ಮಾಡಿದ್ದಾರೆ. ಕೇದಗೆ ಗಿಡಕ್ಕೆ ಕೈಹಾಕುವಾಗಲೂ ಬಹಳಷ್ಟು ಜಾಗರೂಕತೆಯಿಂದ ಕೀಳಬೇಕು ಅನ್ನುವ ಎಚ್ಚರಿಕೆ ಹಿರಿಯರು ನೀಡುತ್ತಾ ಬಂದಿದ್ದಾರೆ. ಎಲೆಗಳ ಸುವಾಸನೆಗೆ ನಾಗರಹಾವು ಅದರ ಪೊದೆಯಲ್ಲಿಯೇ ಜಾಸ್ತಿಯಾಗಿ ನಿಲ್ಲುವುದುಂಟು ಎಂಬ ನಂಬಿಕೆ. ಗ್ರಾಹಕರ ಪ್ರಕಾರ ಒಂದು ಕಟ್ಟಕ್ಕೆ ರೂ.300 ಪಡೆದುಕೊಳ್ಳಲಾಗಿದೆ. ಇದರಿಂದ ಜನರನ್ನು ವಂಚಿಸಿಯೇ ಎರಡು ದಿನಗಳಲ್ಲಿ ಮಾರಾಟಗಾರರು ಸಾವಿರಾರು ರೂಪಾಯಿ ಸಂಗ್ರಹಿಸಿರುವ ಆರೋಪವೂ ಕೇಳಿಬಂದಿದೆ.