ಸುರತ್ಕಲ್, ಆ 21(DaijiworldNews/MS): ಜೆಸಿಬಿ ಬಳಸಿ ಸುರತ್ಕಲ್ನ ರಾಜಶ್ರೀ ಕಟ್ಟಡದಲ್ಲಿ ಎಟಿಎಂಗೆ ಕನ್ನ ಹಾಕಲು ಯತ್ನಿಸಿದ್ದ ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ನಗರ ಪೊಲೀಸರು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ.
ಬಂಧಿತರನ್ನು ಶಿವಮೊಗ್ಗ ಮೂಲದ ದೇವರಾಜ್ (24), ಭರತ್ ಹೆಚ್ (20), ನಾಗರಾಜ ನಾಯ್ಕ್ (21) ಮತ್ತು ಧನರಾಜ್ ನಾಯ್ಕ್ (22) ಎಂದು ಗುರುತಿಸಲಾಗಿದೆ. ಈ ಪೈಕಿ ಆರೋಪಿ ಧನರಾಜ್ ನಾಯ್ಕ್ ಕೃತ್ಯ ನಡೆಸಿದ್ದ ಆರೋಪಿಗಳಿಗೆ ಆರ್ಥಿಕ ಸಹಾಯ ಮಾಡಿದ್ದ.
ಆರೋಪಿಗಳಿಂದ 50 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 457, 380, 511 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ದೇವರಾಜ್ ನಾಯ್ಕ್ ಹಾಗೂ ನಾಗರಾಜ ನಾಯ್ಕ ವಿರುದ್ಧ ಶಿಕಾರಿಪುರ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳಿವೆ.
ವಿಚಾರಣೆ ವೇಳೆ ಜು. 26 ರಂದು ಶಿವಮೊಗ್ಗದಲ್ಲಿ ವಿನೋಭಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೆಸಿಬಿ ಬಳಸಿ ಆಕ್ಸಿಸ್ ಬ್ಯಾಂಕಿನ ಎಟಿಎಂ ಒಡೆಯಲು ಯತ್ನಿಸಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳು ಆಗಸ್ಟ್ 4 ರ ಮಧ್ಯರಾತ್ರಿ ಪಡುಬಿದ್ರಿ-ಕಾರ್ಕಳ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಜೆಸಿಬಿ ಅನ್ನು ಕದ್ದು, ಸುರತ್ಕಲ್ನಲ್ಲಿ ಎಟಿಎಂ ಕಳ್ಳತನ ಕೃತ್ಯಕ್ಕೆ ಯತ್ನಿಸಿದ್ದರು.
ಆರೋಪಿಗಳ ಪೈಕಿ ಮೂವರಿಗೆ ಕೋರ್ಟ್ 4 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ್ದು, ನಾಲ್ಕನೇ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ