ಮಂಗಳೂರು,ಏ 09(MSP): 'ದೇಶದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗದಿದ್ದರೆ ದೇಶ ವಿಭಜನೆಯಾಗುತ್ತೆ. ಪ್ರತಿ ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿ ತಲೆ ಎತ್ತಲಿದೆ' ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಬಂಟ್ಸ್ ಹಾಸ್ಟೆಲ್ ಸನಿಹ ಇರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಏ. 9 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಹರಿಕೃಷ್ಣ ಬಂಟ್ವಾಳ್ , 'ದೇಶದಲ್ಲಿ ಮತ್ತೆ ಮೋದಿ ನಾಯಕತ್ವದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕಿದೆ. ಇಲ್ಲವಾದಲ್ಲಿ ದೇಶ ವಿಭಜನೆಯಾಗುತ್ತೆ. ಉಗ್ರ ಮಸೂದ್ ಅಜರ್, ಸಯೀದ್ ಹಫೀಝ್ ಸಂಸ್ಕೃತಿ ದೇಶದಲ್ಲಿ ತಲೆ ಎತ್ತಲಿದೆ. ಆದ್ದರಿಂದ ಮೋದಿ ಮತ್ತೆ ಪ್ರಧಾನಿಯಾಗಬೇಕಾದ ಅಗತ್ಯತೆ ದೇಶಕ್ಕಿದೆ' ಎಂದಿದ್ದಾರೆ.
'ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಓಮರ್ ಅಬ್ದುಲ್ಲ ಪ್ರತ್ಯೇಕತೆಯ ಬಗ್ಗೆ ಮಾತನಾಡುತ್ತಿದ್ದರೂ ಕೂಡಾ ಈ ಬಗ್ಗೆ ಕಾಂಗ್ರೆಸ್ ಚಕರಾವೆತ್ತಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಜೆಪಿಗರು ಮಾತ್ರ ಇದನ್ನು ಖಂಡಿಸಿದ್ದಾರೆ. ಹೀಗಾಗಿ ದೇಶ ವಿಭಜನೆಯಾಗುವುದನ್ನು ತಡೆಯಲು ಮೋದಿ ಮತ್ತೆ ಪ್ರಧಾನಿಯಾಗಬೇಕಿದೆ. ಆದರೆ ಅಪ್ಪಿ ತಪ್ಪಿಯೂ ರಾಹುಲ್ ಪ್ರಧಾನಿಯಾಗುವುದಿಲ್ಲ.ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ತಿರುಕನೊಬ್ಬ ಕನಸು ಕಂಡಂತೆ' ಎಂದು ವ್ಯಂಗ್ಯವಾಡಿದ್ದಾರೆ.