Karavali
ಮಂಗಳೂರು: ಪಿಎಂ-ಸ್ವನಿಧಿ : ತ್ವರಿತ ಗುರಿ ಸಾಧನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ನಿರ್ದೇಶನ
- Sun, Aug 20 2023 08:44:41 AM
-
ಮಂಗಳೂರು,ಆ 19(DaijiworldNews/MS): ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ.ಗಳ ಸಾಲಸೌಲಭ್ಯ ನೀಡಿ ಉತ್ತೇಜನ ನೀಡುವ ಪಿಎಂ-ಸ್ವನಿಧಿ (ಪ್ರಧಾನಮಂತ್ರಿಗಳ ರಸ್ತೆ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಜಿಲ್ಲೆಗೆ ನಿಗಧಿ ಪಡಿಸಲಾಗಿರುವ ಗುರಿ ಸಾಧಿಸಲು ಎಲ್ಲಾ ಬ್ಯಾಂಕುಗಳ ಪ್ರತಿ ಶಾಖೆಯಲ್ಲಿ ಕನಿಷ್ಠ 50 ಜನರಿಗೆ ಸಾಲ ಸೌಲಭ್ಯ ನೀಡುವ ಗುರಿ ಇಟ್ಟುಕೊಂಡು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ನಿರ್ದೇಶನ ನೀಡಿದರು.
ಅವರು ಆ.19ರ ಶನಿವಾರ ಲೀಡ್ ಬ್ಯಾಂಕ್ ವತಿಯಿಂದ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ವಿವಿಧ ಬ್ಯಾಂಕುಗಳ ಒಟ್ಟು 633 ಬ್ಯಾಂಕ್ ಶಾಖೆಗಳು ಜಿಲ್ಲೆಯಲಿವೆ, ಆ ಪ್ರತಿಯೊಂದು ಶಾಖೆಯಲ್ಲಿ ತಲಾ 50 ಮಂದಿಗೆ ಸಾಲ ನೀಡಿಕೆಯ ಗುರಿ ಹಾಕಿಕೊಳ್ಳಬೇಕು. ಯಾವುದೇ ನೆಪ ಹೇಳಿ ಸಾಲದ ಅರ್ಜಿ ತಿರಸ್ಕರಿಸಬಾರದು. ಜನಧನ್ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯದಲ್ಲೇ ನಂಬರ್ ಒನ್ ಆಗಿತ್ತು. ಮುದ್ರಾ ಯೋಜನೆಯಡಿ ಬ್ಯಾಂಕ್ಗಳು ಒಂದೇ ವರ್ಷದಲ್ಲಿ 2 ಲಕ್ಷ ಖಾತಾದಾರರಿಗೆ 3,500 ಕೋಟಿ ರು. ಸಾಲ ನೀಡಿವೆ. ಇದನ್ನು ಕೇಂದ್ರ ಸರ್ಕಾರ ಕೂಡ ಶ್ಲಾಘಿಸಿದೆ. ಈ ಬಾರಿ ಕೂಡ ಪಿಎಂ ಸ್ವನಿಧಿ ಹಾಗೂ ಇತ್ತೀಚೆಗೆ ಪ್ರಧಾನಮಂತ್ರಿಯವರು ಪ್ರಕಟಿಸಿರುವ ವಿಶ್ವಕರ್ಮ ಯೋಜನೆಗೆ ಗರಿಷ್ಠ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಈ ಬಾರಿ ಇಡೀ ದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅನುಷ್ಟಾನದಲ್ಲಿ ಮೊದಲ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಮಾತನಾಡಿ, ಪಿಎಂ-ಸ್ವನಿಧಿ ಯೋಜನೆಯಡಿ ಅರ್ಹರಿಗೆ ಸಾಲ ನೀಡಿಕೆಯಲ್ಲಿ ಬ್ಯಾಂಕುಗಳು ತ್ವರಿತ ಕ್ರಮ ಕೈಗೊಳ್ಳಬೇಕು, ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿಗೆ ಇದೊಂದು ಪ್ರಮುಖ ಯೋಜನೆಯಾಗಿದೆ. ಆದ ಕಾರಣ, ಸ್ವನಿಧಿ ಯೋಜನೆಯಲ್ಲಿ ಸಾಲ ನೀಡುವಲ್ಲಿ ಬ್ಯಾಂಕ್ಗಳು ಸಹಕರಿಸಬೇಕು, ಅರ್ಜಿಯನ್ನೂ ತಿರಸ್ಕರಿಸಬಾರದು. ಕೇವಲ ಆಧಾರ್ ಕಾರ್ಡ್ ಆಧಾರದಲ್ಲಿ ಸಾಲ ನೀಡಬೇಕು. ಸಿಬಿಲ್ ಸ್ಕೋರ್ ಕೂಡ ಇದಕ್ಕೆ ಅನ್ವಯವಾಗುವುದಿಲ್ಲ. ಸೆಪ್ಟೆಂಬರ್ ಅಂತ್ಯದೊಳಗೆ ನಿಗದಿತ ಗುರಿಯನ್ನು ತಲುಪಲು ಎಲ್ಲ ಬ್ಯಾಂಕ್ಗಳು ಯತ್ನಿಸಬೇಕು ಎಂದರು.
ಈ ಯೋಜನೆಯಲ್ಲಿ ಹಿಂದಿನ ಒಟ್ಟು 10,342 ಗುರಿ ಸಾಧಿಸಲಾಗಿದೆ. ಮತ್ತೆ ಹೆಚ್ಚುವರಿಯಾಗಿ 4,281 ಅರ್ಜಿಗಳು ಬಾಕಿ ಉಳಿದಿವೆ. ಮಂಗಳೂರು ನಗರ ಪ್ರದೇಶದಲ್ಲೇ ಹೆಚ್ಚು ಅರ್ಜಿಗಳು ಬಾಕಿಯಾಗಿವೆ. ಇದನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ದಿಶೆಯಲ್ಲಿ ನೋಡೆಲ್ ಅಧಿಕಾರಿಯನ್ನು ಪ್ರತಿ ಬ್ಯಾಂಕ್ ಶಾಖೆಗಳಲ್ಲಿ ನೇಮಕ ಮಾಡಬೇಕು. ಅವರ ಮೂಲಕ ಈ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಬೇಕು. ಒಮ್ಮೆ ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ನೀಡಿದ ಬಳಿಕ ಎರಡನೇ ಬಾರಿ 20 ಸಾವಿರ ರು. ಸಾಲಕ್ಕೆ ಅರ್ಜಿ ಸಲ್ಲಿಸಿದರೆ ವಿಳಂಬಿಸದೆ ಸಾಲ ಮಂಜೂರು ಮಾಡಬೇಕು, ಮೂರನೇ ಬಾರಿಯೂ ಸಾಲದ ಬೇಡಿಕೆಯನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿಯವರು ತಾಕೀತು ಮಾಡಿದರು.
ಅಕ್ಟೋಬರ್ ಮೊದಲ ವಾರದಲ್ಲಿ ಲೋನ್ ಮೇಳ:
ಅಕ್ಟೋಬರ್ ಮೊದಲ ವಾರದಲ್ಲಿ ಮಂಗಳೂರಿನಲ್ಲಿ ಕೇಂದ್ರ ಸರ್ಕಾರದ ವಿವಿಧ ಸಾಲ ಯೋಜನೆಗಳ ಫಲಾನುಭವಿಗಳ ಲೋನ್ ಮೇಳ ಆಯೋಜಿಸಲಾಗುವುದು. ಇದಕ್ಕೆ ಕೇಂದ್ರ ವಿತ್ತ ಸಚಿವರನ್ನು ಆಹ್ವಾನಿಸಲಾಗುವುದು. ಅಷ್ಟರೊಳಗೆ ಎಲ್ಲ ಬ್ಯಾಂಕ್ಗಳು ಸಾಲ ಯೋಜನೆಯಲ್ಲಿ ಗುರಿ ಮೀರಿದ ಸಾಧನೆ ಮಾಡಬೇಕು. ಲೋನ್ ಮೇಳದಲ್ಲಿ ಸಾಲ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಸೂಚಿಸಿದರು.
ಬ್ಯಾಂಕ್ಗಳಲ್ಲಿ ಭಾಷೆ ತೊಡಕು ನಿವಾರಿಸಿ:
ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಭಾಷೆ ತೊಡಕು ನಿವಾರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗಗಳಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕ್ಗಳಲ್ಲಿ ಕನ್ನಡ, ತುಳು ಭಾಷೆ ಬಲ್ಲ ಅಧಿಕಾರಿ ಅಥವಾ ಸಿಬ್ಬಂದಿ ಇರಬೇಕು. ಇಲ್ಲದಿದ್ದರೆ ಗ್ರಾಮೀಣ ಜನತೆ ಸಹಕಾರಿ ಬ್ಯಾಂಕ್ಗಳತ್ತ ಮುಖ ಮಾಡುವಂತಾಗುತ್ತದೆ. ಕನಿಷ್ಠ ಸ್ಥಳೀಯ ಭಾಷೆ ಬಲ್ಲವರನ್ನು ನೇಮಕ ಮಾಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದರು.
10 ರು. ನಾಣ್ಯ ಚಲಾವಣೆ ಇದೆ:
ಪ್ರಸಕ್ತ 10 ರೂ.ಗಳ ನಾಣ್ಯ ಚಲಾವಣೆಯಲ್ಲಿ ಇದೆ. ಆದರೆ ಬಹುತೇಕ ಜನತೆ ಹಾಗೂ ವ್ಯಾಪಾರಸ್ಥರು 10 ರು. ನಾಣ್ಯ ಚಲಾವಣೆಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ 10 ರೂ.ಗಳ ನಾಣ್ಯ ಬ್ಯಾಂಕಿನಲ್ಲೇ ಉಳಿಯುವಂತಾಗಿದೆ. ಈ ಬಗ್ಗೆ ಜನತೆಯಲ್ಲಿ ಹಾಗೂ ವ್ಯಾಪಾರಸ್ಥರಲ್ಲಿ ಈ ನಾಣ್ಯ ಚಲಾವಣೆಯಲ್ಲಿ ಇರುವ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.
ಶೂನ್ಯ ಉಳಿತಾಯ ಖಾತೆಗೆ ಕನಿಷ್ಠ ಬ್ಯಾಲೆನ್ಸ್ ನಿಬಂಧನೆ ಕೂಡದು:ಬ್ಯಾಂಕಿನಲ್ಲಿ ಶೂನ್ಯ ಉಳಿತಾಯ ಖಾತೆಗೆ ಕನಿಷ್ಠ ಬ್ಯಾಲೆನ್ಸ್ ಇರಬೇಕು ಎಂದು ಕೆಲವು ಬ್ಯಾಂಕ್ಗಳು ನಿಬಂಧನೆ ವಿಧಿಸುವಂತಿಲ್ಲ ಎಂದು ಸಂಸದ ನಳಿನ್ ಕುಮಾರ್ ಹಾಗೂ ಜಿ.ಪಂ. ಸಿಇಒ ಡಾ.ಆನಂದ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ಆರ್ಬಿಐ ನಿಯಮ ಪ್ರಕಾರ ಶೂನ್ಯ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಬೇಕು ಎಂದು ನಿಬಂಧನೆ ಹಾಕುವಂತಿಲ್ಲ. ನಿಯಮಕ್ಕೆ ವಿರುದ್ಧವಾಗಿ ವರ್ತಿಸುವ, ಖಾತಾದಾರರಿಗೆ ತೊಂದರೆ ನೀಡುವ ಬಗ್ಗೆ ದೂರುಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಶೇ.12.46ರ ವಹಿವಾಟು ಬೆಳವಣಿಗೆ:
2023ರ ಜೂನ್ ಅಂತ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್ಗಳ ಒಟ್ಟು ವ್ಯವಹಾರ 1,06,722.18 ಕೋಟಿ ರು. ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ.12.46ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಮಾಹಿತಿ ನೀಡಿದರು.
ಜೂನ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ಬ್ಯಾಂಕ್ಗಳ ಸಂಖ್ಯೆ 638 ಆಗಿದೆ. ಒಟ್ಟು ಠೇವಣಿ 63,605.80 ಕೋಟಿ ರು. ಆಗಿದ್ದು, ಶೇ.8.96ರ ಬೆಳವಣಿಗೆ ದಾಖಲಿಸಿದೆ. ಒಟ್ಟು ಸಾಲ 43,116.38 ಕೋಟಿ ರು. ಆಗಿದ್ದು, ಶೇ.18.05ರ ಬೆಳವಣಿಗೆ ಸಾಧಿಸಿದೆ. ಸಾಲ ಠೇವಣಿ ಅನುಪಾತ ಶೇ.67.79 ಆಗಿದೆ. ಜೂನ್ ಅಂತ್ಯಕ್ಕೆ ಆದ್ಯತಾ ಮತ್ತು ಅದ್ಯೇತರ ವಲಯಗಳಲ್ಲಿ ಒಟ್ಟು 17,048.26 ಕೋಟಿ ರು. ಸಾಲ ವಿತರಿಸಲಾಗಿದ್ದು, ವಾರ್ಷಿಕ ಗುರಿ 43,300 ಕೋಟಿ ರು.ಗಳ ಶೇ.39.37 ನಿರ್ವಹಣೆ ಸಾಧಿಸಿದಂತಾಗಿದೆ ಎಂದರು.ಆರ್ಬಿಐ ಪ್ರಾದೇಶಿಕ ಎಜಿಎಂ ತನು ನಂಜಪ್ಪ, ನಬಾರ್ಡ್ ಪ್ರಾದೇಶಿಕ ಡಿಜಿಎಂ ಸಂಗೀತಾ ಕರ್ತಾ, ಕೆನರಾ ಬ್ಯಾಂಕ್ ಡಿಜಿಎಂ ಸುಧಾಕರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ ವೇದಿಕೆಯಲ್ಲಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಬ್ಯಾಂಕ್ಗಳ ಮ್ಯಾನೇಜರ್ಗಳು, ಅಧಿಕಾರಿಗಳು ಸಭೆಯಲ್ಲಿದ್ದರು.