ಮಂಗಳೂರು, ಆ 18 (DaijiworldNews/SM): ಬೆಂಗರೆಯನ್ನು ಗಾಂಜಾ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಒಂದಾಗಿದ್ದಾರೆ. ಹಾಗೂ ಪೊಲೀಸ್ ಇಲಾಖೆಯನ್ನು ಮನವಿ ಮಾಡಿಕೊಂಡಿದ್ದಾರೆ. ಬೆಂಗರೆಯಲ್ಲಿ ಗಾಂಜಾ ವ್ಯಸನ ಮಾಡುವವರು ಯಾರನ್ನೂ ಲೆಕ್ಕಿಸದೆ ನಿರ್ಬೀತಿಯಿಂದ ಗಾಂಜಾ ವ್ಯಸನ ಮಾಡುತ್ತಾರೆ. ಇದರಿಂದ ಪರಿಸರವಾಸಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.
ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕದ್ದು ಮುಚ್ಚಿ ಗಾಂಜಾ, ಮದ್ಯಪಾನದಂತಹ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಈಗ ಸಣ್ಣವಯಸ್ಸಿನವರು ಕೂಡ ಡ್ರಗ್ಸ್ ಚಟಕ್ಕೆ ಅಂಟಿಕೊಳ್ಳುತ್ತಿದ್ದಾರೆ. ಇವರಿಗೆ ಎಲ್ಲಿಂದ ಹಣ, ಮಾದಕ ವಸ್ತುಗಳು ಬರುತ್ತವೆ ಎಂಬುದನ್ನು ಪತ್ತೆ ಮಾಡಬೇಕು. ಆ ಮೂಲಕ ಬೆಂಗರೆಯನ್ನು ಡ್ರಗ್ಸ್ ಮುಕ್ತಗೊಳಿಸಬೇಕು ಮತ್ತು ನೆಮ್ಮದಿಯ ವಾತಾವರಣ ಸೃಷ್ಟಿಸಬೇಕು ಎಂದು ಬೆಂಗರೆಯ ಸಾರ್ವಜನಿಕರು ಆಗ್ರಹಿಸಿದರು.
ಗಾಂಜಾ ಮುಕ್ತ ಬೆಂಗರೆ ನಿರ್ಮಾಣದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗರೆಯ ಮುಹಿಯುದ್ದೀನ್ ಜುಮಾ ಮಸೀದಿಯ ಮುಂಭಾಗ ಆಯೋಜಿಸಲಾಗಿದ್ದ ಪೊಲೀಸ್ ಇಲಾಖೆಯೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಹಲವು ಮಂದಿ ಬೆಂಗರೆ ಪರಿಸರದಲ್ಲಿ ಡ್ರಗ್ಸ್ನಿಂದ ಆಗುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟರು.
ಬೆಂಗರೆಯಲ್ಲಿ ಕಳ್ಳತನ, ಹಲ್ಲೆ, ಸುಲಿಗೆ ಘಟನೆಗಳ ಬಗ್ಗೆಯೂ ಪೊಲೀಸರು ನಿಗಾ ವಹಿಸಬೇಕು. ಕೆಲವರು ಮರ್ಯಾದೆಗೆ ಅಂಜಿ ಜಮಾತ್ ಕಮಿಟಿ, ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ. ವಾರಾಂತ್ಯದಲ್ಲಿ ಹೊರ ಭಾಗದಿಂದಲೂ ಇಲ್ಲಿಗೆ ಜನರು ಬರುತ್ತಾರೆ. ಅವರ ಮೇಲೂ ನಿಗಾವಹಿಸಬೇಕು. ಡ್ರಗ್ಸ್ ದುಷ್ಪರಿಣಾಮದ ಬಗ್ಗೆ ಮಹಿಳೆಯರು, ಶಾಲಾ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಗಾಂಜಾ ಮತ್ತಿತರ ಡ್ರಗ್ಸ್ಗಳನ್ನು ಪೂರೈಕೆ ಮಾಡುವ ಮುಖ್ಯ ಪೆಡ್ಲರ್ಗಳ ಮೇಲೆ ಕ್ರಮ ಕೈಗೊಳ್ಳಿ ಎಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಪೊಲೀಸ್ ಇಲಾಖೆಯ ಮುಖ್ಯ ಗುರಿ ಡ್ರಗ್ಸ್ ಪೆಡ್ಲರ್ಗಳಾಗಿದ್ದಾರೆ. ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.